

ಭಾರಿ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಮತ್ತು ಮತದಾನೋತ್ತರ ಸಮೀಕ್ಷೆಗಳು ಊಹಿಸಿದಂತೆಯೇ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿ ಈ ಚುನಾವಣೆಯಲ್ಲಿ ಸಾಕಷ್ಟು ಶಕ್ತಿ ವಿನಿಯೋಗಿಸಿತಾದರೂ ಅದು ಕೇಜ್ರಿವಾಲರ ಎದುರು ಸಮರ್ಥ ಮುಖವನ್ನು ಪರಿಚಯಿಸಲು ವಿಫಲವಾಯಿತು ಮತ್ತು ಜನರಿಗೆ ಅವಶ್ಯವಿದ್ದ ವಿಷಯಗಳನ್ನು ಉಲ್ಲೇಖಿಸುವುದು ಬಿಟ್ಟು ಭಾವನಾತ್ಮಕ ಸಂಗತಿಗಳ ಮೊರೆ ಹೋಯಿತು. ಕಳೆದ ಬಾರಿಗಿಂತ ಬಿಜೆಪಿ ಸಾಧನೆ ಕೊಂಚ ಸುಧಾರಿಸಿದೆ ಎಂಬುದು ಬಿಟ್ಟರೆ ಆಮ್ ಆದ್ಮಿ ಪಕ್ಷಕ್ಕೆ ಪ್ರಬಲ ಎದುರಾಳಿಯಾಗಿ ಹೊರಹೊಮ್ಮಿಲ್ಲ. ದೆಹಲಿಯಲ್ಲಿ ಕಳೆದ ಎರಡು ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ಅಧಿಕಾರದಿಂದ ದೂರವಿರುವ ಬಿಜೆಪಿ, ಇನ್ನೈದು ವರ್ಷ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಬೇಕಿದೆ. ಇತ್ತೀಚಿನ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಜನರು ಕೇಂದ್ರದಲ್ಲಿ ಬಿಜೆಪಿ, ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಎಂಬ ನೀತಿ ಅನುಸರಿಸಿದ್ದು, ದೆಹಲಿಯಲ್ಲೂ ಅದೇ ಸೂತ್ರ ಮುಂದುವರಿದಿದೆ.
ಆಮ್ ಆದ್ಮಿ ಪಕ್ಷ ಗೆಲುವಿನ ಬಗ್ಗೆ ವಿಶ್ವಾಸವನ್ನು ಹೊಂದಿತ್ತು. ಆದರೆ, ಉಳಿದ ಪಕ್ಷಗಳಿಗೆ ಹೋಲಿಸಿದರೆ ‘ರಾಜಕೀಯ ಶಿಶು’ ಎಂದೇ ಭಾವಿಸಲಾಗಿದ್ದ ಆಪ್ ಆರಂಭದ ಹೆಜ್ಜೆಗಳನ್ನೇ ಎಡವಿತ್ತು. ಸ್ಪಷ್ಟ ಬಹುಮತ ಬಾರದಿದ್ದಾಗ ರಾಜಕೀಯ ಕಡುವಿರೋಧಿ ಕಾಂಗ್ರೆಸ್ನೊಂದಿಗೇ ಕೈ ಜೋಡಿಸಿ ಸರ್ಕಾರ ರಚಿಸಿತು. ಅದು ದೀರ್ಘಕಾಲ ಬಾಳಲಿಲ್ಲ ಎಂಬುದು ಬೇರೆ ಮಾತು. ಕಳೆದ ಬಾರಿಯಂತೂ ಜನ ಸ್ಪಷ್ಟ ಬಹುಮತ ಕೊಟ್ಟ ಬಳಿಕವೂ ಈ ಪಕ್ಷದವರ ರಾಜಕೀಯ ಅಪ್ರಬುದ್ಧತೆ ಢಾಳವಾಗಿ ಗೋಚರಿಸಿತು. ಕೇಂದ್ರ ಸರ್ಕಾರದ ವಿರುದ್ಧ ಧರಣಿ, ಲೆಫ್ಟಿನೆಂಟ್ ಗವರ್ನರ್ ಜತೆ ತೀವ್ರ ಭಿನ್ನಾಭಿಪ್ರಾಯ. ಹೀಗೆ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜನರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಪ್ನ್ನು ತಿರಸ್ಕರಿಸಿದರು. ಆ ಬಳಿಕ ಎಚ್ಚೆತ್ತುಕೊಂಡ ಅರವಿಂದ ಕೇಜ್ರಿವಾಲ್ ಮತ್ತು ಅವರ ತಂಡ ಧರಣಿಯ ಪೆಂಡಾಲ್ಗಳನ್ನು ತೆರವುಗೊಳಿಸಿ ಜನರ ಸಮಸ್ಯೆಗಳ ಕಡೆ ಗಮನ ಹರಿಸಿದರು. ಆರೋಗ್ಯ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿದರು. ಪರಿಣಾಮ, ಮೊಹಲ್ಲಾ ಕ್ಲಿನಿಕ್ಗಳು ಸ್ಥಾಪಿತವಾದವು. ಸರ್ಕಾರಿ ಶಾಲೆಗಳಿಗೆ ಸುಧಾರಣೆಯ ಸ್ಪರ್ಶ ಸಿಕ್ಕಿತು. ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ಎಟಕುವಂತಾಯಿತು. ಜತೆಗೆ, ಉಚಿತ ಕೊಡುಗೆಗಳು ಜನರನ್ನು ಆಕರ್ಷಿಸಿದ್ದು ಸುಳ್ಳಲ್ಲ. ಅಲ್ಲದೆ, ಈ ಬಾರಿಯೂ ಹಲವು ‘ಉಚಿತ’ ಭರವಸೆ ನೀಡಲಾಗಿದೆ.
ಸಮರ್ಥ ನಾಯಕತ್ವ, ಜನರನ್ನು ತಲುಪುವ ವಿಷಯವಿಲ್ಲದೆ ಸೊರಗಿರುವ ಕಾಂಗ್ರೆಸ್ ಕಳೆದ ಬಾರಿಯಂತೆ ಈ ಚುನಾವಣೆಯಲ್ಲೂ ‘ಶೂನ್ಯಸಂಪಾದನೆ’ ಮುಂದುವರಿಸಿದೆ. ಅಧಿಕಾರದಿಂದ ಬಹುದೂರ ಬಂದಿರುವ ಅದು ಸದ್ಯಕ್ಕಂತೂ ಚೇತರಿಸಿಕೊಳ್ಳುವ ಲಕ್ಷಣವಿಲ್ಲ. 70 ಸದಸ್ಯರ ಬಲದ ವಿಧಾನಸಭೆಗೆ 63 ಸ್ಥಾನಗಳನ್ನು ಗಳಿಸಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಮುಂದೆ ಹಲವು ಜ್ವಲಂತ ಸವಾಲುಗಳಿವೆ. ದೆಹಲಿ ವರ್ಚಸ್ಸು ಮತ್ತು ಆರೋಗ್ಯವನ್ನು ಹಾಳು ಮಾಡುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸುತ್ತ, ಕೇಂದ್ರದೊಂದಿಗೆ ಸಮನ್ವಯದಿಂದ ವ್ಯವಹರಿಸಬೇಕಿದೆ.