ಅರೆಬೆತ್ತಲಾಗಿ ಕುಣಿದು ಕುಪ್ಪಳಿದ ಮೆಸ್ಕಾಂ ಸಿಬ್ಬಂದಿಗೆ ಆಯ್ತು ತಕ್ಕಶಾಸ್ತಿ! ವಿಡಿಯೋ ವೈರಲ್

Mescom staff violation
Published on

ಶಿವಮೊಗ್ಗ: ಅಂಜನಾಪುರ ಡ್ಯಾಂ ಬಳಿ ಪಾರ್ಟಿ ನಡೆಸಿದ್ದ ಶಿಕಾರಿಪುರ ವಿಭಾಗದ ಮೆಸ್ಕಾಂ ಸಿಬ್ಬಂದಿ, ಅರೆಬೆತ್ತಲೆಯಾಗಿ ನೃತ್ಯ ಮಾಡಿದ್ದರು‌. ಅಲ್ಲದೆ, ಕುಡಿದ ಅಮಲಿನಲ್ಲಿ ಬುಲೆಟ್ ಬೈಕನ್ನೇರಿ ಸ್ಟಂಟ್ ಮಾಡುತ್ತ ಕುಣಿದು ಕುಪ್ಪಳಿಸಿದ್ದರು. ಈ ಪಾರ್ಟಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿಗೀಗ ಸಂಕಷ್ಟ ಎದುರಾಗಿದೆ.

ನವೆಂಬರ್ 4ರಂದು ಕಿರಿಯ ಇಂಜಿನಿಯರ್ ಚಂದ್ರಶೇಖರ್ ರಾಥೋಡ್, ಸಹಾಯಕ ಉಗ್ರಾಣ ಪಾಲಕ ಎಸ್.ಎ.ರವಿ, ಪವರ್ ಮೆನ್ ಪಿ.ಎಲ್.ವಿನಯ್ ಕುಮಾರ್, ಲೈನ್‍ ಮೆಕ್ಯಾನಿಕ್‍ಗಳಾದ ಕೆ.ಎಸ್.ಮಂಜುನಾಥ್, ಎಲ್.ಸುರೇಶ್, ಟಿ.ಮಹೇಶ್ವರಪ್ಪ ಅವರನ್ನೊಳಗೊಂಡ ತಂಡ ಕಚೇರಿ ಅವಧಿಯಲ್ಲಿ ಅಂಜನಾಪುರ ಡ್ಯಾಂ ಬಳಿ ಪಾರ್ಟಿ ಮಾಡಿತ್ತು.

ಡ್ಯಾಂ ಬಳಿ ಅರೆಬೆತ್ತಲಾಗಿ ಕುಣಿದು ಕುಪ್ಪಳಿಸಿದ ಮೆಸ್ಕಾಂ ಸಿಬ್ಬಂದಿ, ಅಲ್ಲೇ ಮದ್ಯ ಸೇವಿಸುತ್ತ ಮೋಜು-ಮಸ್ತಿ ಮಾಡಿದ್ದರು. ಅಲ್ಲದೆ ಮದ್ಯ ನಶೆಯಲ್ಲಿ ಬುಲೆಟ್ ಬೈಕ್​ ಮೇಲೆ ಸವಾರಿ ಮಾಡುತ್ತ ಸ್ಟಂಟ್ ಮಾಡಿದ್ದರು. ಈ ಸಿಬ್ಬಂದಿಯ ಪಾರ್ಟಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಯಿತು.

ಕಂಪನಿಯ ಗೌರವಕ್ಕೆ ಧಕ್ಕೆ ತಂದಿರುವ, ಕಚೇರಿ ಅವಧಿಯಲ್ಲಿ ಮೋಜು–ಮಸ್ತಿಯಲ್ಲಿ ತೊಡಗಿದ್ದಕ್ಕೆ ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡ ಹಿರಿಯ ಅಧಿಕಾರಿಗಳು, ಸಿಬ್ಬಂದಿಗೆ ತಕ್ಕಶಾಸ್ತಿ ಮಾಡಿದ್ದಾರೆ. ಶಿಕಾರಿಪುರ ವಿಭಾಗದ ಕಿರಿಯ ಇಂಜಿನಿಯರ್ ಸೇರಿ ಆರು ಮಂದಿ ಮೆಸ್ಕಾಂ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿ ಮೆಸ್ಕಾಂ ಶಿವಮೊಗ್ಗ ಅಧೀಕ್ಷಕ ಇಂಜಿನಿಯರ್ ಮತ್ತು ಶಿಕಾರಿಪುರ ಕಾರ್ಯನಿರ್ವಾಹಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net