

ಮಂಗಳೂರು : ಮೆಸ್ಕಾಂ ಮಂಗಳೂರು ವಿಭಾಗದಲ್ಲಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಟಿವಿ/ಇಂಟರ್‌ನೆಟ್ /ಒಎಫ್‌ಸಿ
ಕೇಬಲ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಕೇಬಲ್ ಆಪರೇಟರ್‌ಗಳ ಸಭೆ ಮೆಸ್ಕಾಂನ
ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಬಿ.ಎಸ್.ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಮತ್ತು ಸ್ಥಳೀಯ ಕೇಬಲ್ ಆಪರೇಟರ್‌ಗಳು ಮೆಸ್ಕಾಂನ ವಿದ್ಯುತ್ ಕಂಬಗಳಲ್ಲಿ ಕೇಬಲ್‌ಗಳನ್ನು ಸುರುಳಿ ಸುತ್ತಿಕೊಂಡು ತೀರಾ ಕೆಳಮಟ್ಟದಲ್ಲಿ ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾಯಕಾರಿ ಆಗಬಹುದಾದ ರೀತಿಯಲ್ಲಿ ಎಳೆದಿರುವ ಬಗ್ಗೆ ಸಾರ್ವಜನಿಕರು ಮೆಸ್ಕಾಂಗೆ ದೂರುಗಳನ್ನು ಸಲ್ಲಿಸಿದ್ದಾರೆ.
ಈ ಹಿನ್ನಲೆಯಲ್ಲಿ ತುರ್ತಾಗಿ ಸರಿಪಡಿಸಲು ಅಥವಾ ತೆರವುಗೊಳಿಸಲು ಕೇಬಲ್ ಆಪರೇಟರ್‌ಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.
ಅಪಾಯಕಾರಿಯಾಗಬಹುದಾದ ಕೇಬಲ್‌ಗಳನ್ನು ಸರಿಪಡಿಸಲು ಮೆಸ್ಕಾಂ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ
ಈ ಕೇಬಲ್‌ಗಳಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದಲ್ಲಿ ಸಂಬಂಧಿಸಿದ ಕೇಬಲ್ ಆಪರೇಟರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಯಾವುದೇ ಹೊಸ ಕೇಬಲ್‌ಗಳನ್ನು ಎಳೆಯಲು ಹಾಗೂ ನವೀಕರಣಕ್ಕೆ ಮಹಾನಗರ
ಪಾಲಿಕೆಯ ಎನ್‌ಓಸಿ ಪಡೆಯಬೇಕು. ಈ ಬಗ್ಗೆ ನಿರಾಕ್ಷೇಪಣಾ ಪತ್ರ ಮೆಸ್ಕಾಂ ಅನುಮತಿಗೆ ಅಗತ್ಯ ಎಂದು ಸಭೆಯಲ್ಲಿ ತಿಳಿಸಲಾಯಿತು.
ಕೇಬಲ್‌ಗಳನ್ನು ಮೆಸ್ಕಾಂ ಇಲಾಖೆಯ ನಿಯಮಾವಳಿಗಳಂತೆ ಸರಿಪಡಿಸಲಾಗುವುದೆಂದು ಕೇಬಲ್ ಆಪರೇಟರ್‌ಗಳು ಭರವಸೆ ನೀಡಿದರು. ಮೆಸ್ಕಾಂನ ಅತ್ತಾವರ, ಮಣ್ಣಗುಡ್ಡ ಮತ್ತು ಕುಲಶೇಖರ ಉಪವಿಭಾಗ ಅಧಿಕಾರಿಗಳಾದ ಚಂದ್ರಶೇಖರ್ ಪೂಜಾರಿ, ವಸಂತ ಕುಮಾರ್, ಸತೀಶ್ , ವಿಭಾಗ ಅಧಿಕಾರಿಗಳಾದ ಸೈಯದ್ ರೆಹಮಾನ್ ಮತ್ತು ಶಾಂತಾನಂದ ಉಪಸ್ಥಿತರಿದ್ದರು.