ಮೆಸ್ಕಾಂ ಬಹುಕೋಟಿ ಅವ್ಯವಹಾರ, ಕ್ರಮಕ್ಕೆ ಸರ್ಕಾರ ಮೀನಮೇಷ

shimogga Mescom office
ಶಿವಮೊಗ್ಗದ ಮೆಸ್ಕಾಂ ಮುಖ್ಯ ಕಚೇರಿಯ ಹೊರನೋಟ.
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ಮೆಸ್ಕಾಂ(ಮಂಗಳೂರು ವಿದ್ಯುತ್ ಸರಬರಾಜು ಕಂಪನಿ) ಶಿವಮೊಗ್ಗ ವಿಭಾಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಡಿಡಿಯುಜಿಜೆವೈ(ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ) ಕಾಮಗಾರಿಯಲ್ಲಿನ ಬರೋಬ್ಬರಿ 12.21 ಕೋಟಿ ರೂ. ಅವ್ಯವಹಾರದ ತನಿಖಾ ವರದಿ ಮೂಲೆ ಸೇರಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ.

2017ರಲ್ಲಿ ಶಿವಮೊಗ್ಗ ವಲಯದಲ್ಲಿ ಆರಂಭವಾದ ನಿರಂತರ ಜ್ಯೋತಿ ಕಾಮಗಾರಿಯಲ್ಲಿ ದೊಡ್ಡ ಲೋಪ ಕಂಡುಬಂದಿತ್ತು. 68 ಫೀಡರ್ ಅಳವಡಿಕೆಯಲ್ಲಿ 12.21 ಕೋಟಿ ರೂ. ವ್ಯಾತ್ಯಾಸವಾಗಿದ್ದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸರ್ಕಾರಕ್ಕೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಸಮಿತಿ 2022ರ ಅಂತ್ಯದಲ್ಲಿ ವರದಿ ಸಲ್ಲಿಸಿದೆ. ಇದೀಗ ಹೊಸ ಸರ್ಕಾರ ಬಂದ ಬಳಿಕಯೂ ತನಿಖಾ ವರದಿಯು ಸರ್ಕಾರದ ಮಟ್ಟದಲ್ಲೇ ಧೂಳು ಹಿಡಿಯುತ್ತಿರುವುದು ವಿಪರ್ಯಾಸ.
2021ರ ಡಿ.26ರಂದು ಸಭೆ ನಡೆಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಹುಕೋಟಿ ರೂ. ಅವ್ಯವಹಾರ ಪತ್ತೆಮಾಡಿದ್ದರು. 2022ರ ಜ.1ರಂದು ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವಿ.ಸುನೀಲ್‌ಕುಮಾರ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಹಗರಣದ ಸಮಗ್ರ ತನಿಖೆಗೆ ಅಂದಿನ ಮೆಸ್ಕಾಂ ಎಂಡಿ ಪ್ರಶಾಂತ್‌ಕುಮಾರ್ ಮಿಶ್ರಾ ನೇತೃತ್ವದಲ್ಲಿ ಕೆಪಿಟಿಸಿಎಲ್ ಎಸ್‌ಒ ಸುಭಾಷ್ ಭೋಸ್ಲೆ, ನಿರ್ದೇಶಕ ಕೆ.ವಿ.ಶಿವಕುಮಾರ್ ಮತ್ತು ನಿಯಂತ್ರಣಾಧಿಕಾರಿ ಕೆ.ಜಿ.ಅನಿತಾ ಅವರ ಸಮಿತಿ ರಚನೆ ಮಾಡಿದ್ದರು. ಎಂಟತ್ತು ತಿಂಗಳ ಬಳಿಕ ಸರ್ಕಾರ ತನಿಖಾ ಸಮಿತಿಗೆ ವರದಿ ಸಲ್ಲಿಸಲಾಯಿತು. ಅಲ್ಲಿಂದ ಇದುವರೆಗೂ ತನಿಖಾ ವರದಿ ಬಗ್ಗೆ ಸರ್ಕಾರ ಚಕಾರವನ್ನೇ ಎತ್ತುತ್ತಿಲ್ಲ. ಒಟ್ಟಾರೆ ಹಗರಣವನ್ನೇ ಮುಚ್ಚಿಹಾಕುವ ಅಥವಾ ಮೇಲಧಿಕಾರಿಗಳ ತಲೆದಂಡ ಆಗುವುದನ್ನು ತಪ್ಪಿಸುವ ಹುನ್ನಾರ ನಡೆದಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಭ್ರಷ್ಟಾಚಾರ ಕಂಡು ಸಚಿವರೇ ದಂಗು!
2022ರ ಜ.1ರಂದು ಡಿಸಿ ಕಚೇರಿಯಲ್ಲಿ ಸಚಿವ ಸುನೀಲ್‌ಕುಮಾರ್ ಮೆಸ್ಕಾಂ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಭಾರಿ ಅವ್ಯವಹಾರ ನಡೆದಿದ್ದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿರುವ ಭ್ರಷ್ಟಾಚಾರ ಕಂಡು ಸ್ವತಃ ಅಂದಿನ ಸಚಿವ ಸುನೀಲ್‌ಕುಮಾರ್ ಅವರೇ ದಂಗಾಗಿದ್ದರು. 24 ಗಂಟೆಯಲ್ಲೇ(ಜ.2) ಶಿವಮೊಗ್ಗದ ಪಾರ್ಯ ಮತ್ತ ಪಾಲನಾ ವೃತ್ತ ಎಂಆರ್‌ಟಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಮದನ್ ಮತ್ತು ಭದ್ರಾವತಿ ಗ್ರಾಮೀಣ ಉಪ ವಿಭಾಗ ಘಟಕ 1ರ ಕಿರಿಯ ಇಂಜಿನಿಯರ್ ಕೆ.ಬಾಲಕೃಷ್ಣ ಎಂಬುವರನ್ನು ಅಮಾನತುಗೊಳಿಸಲಾಗಿತ್ತು. ಇದು ಮೆಸ್ಕಾಂ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೇಲ್ಮಟ್ಟದ ಅಧಿಕಾರಿಗಳನ್ನು ಉಳಿಸಲು ಕೆಳಹಂತದ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು.

ಏನಿದು ಕರ್ಮಕಾಂಡ?
2017ರಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ಕು ವಿಭಾಗಗಳಲ್ಲಿ ಡಿಡಿಯುಜಿಜೆವೈ ಯೋಜನೆಯಡಿ 68 ಫೀಡರ್‌ಗಳ ಅಳವಡಿಕೆ ಆರಂಭಗೊಂಡಿತ್ತು. ಫೀಡರ್ ಬೇರ್ಪಡಿಸುವಿಕೆ, ಫೀಡರ್‌ಗಳ ಅಳವಡಿಕೆಯಲ್ಲಿ 12.21 ಕೋಟಿ ರೂ. ಭಾರಿ ಗೋಲ್‌ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂತು. ಜಿಲ್ಲೆಯ 37 ಫೀಡರ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳುವ ಮೊದಲೇ ದಿನಾಂಕವಿಲ್ಲದೆ ಮತ್ತು ಗುತ್ತಿಗೆದಾರರಿಗೆ ಸೆಕ್ಷನ್ ಅಧಿಕಾರಿಗಳ ಸಹಿ ಇಲ್ಲದೆ ಪ್ರಮಾಣಪತ್ರಗಳನ್ನು ಅಧಿಕಾರಿಗಳು ವಿತರಿಸಿದ್ದು ಅನುಮಾನಕ್ಕೆ ಕಾರಣವಾಗಿತ್ತು. ವಿದ್ಯುತ್ ಕಂಬಗಳಿಗೆ ನಂಬರ್ ಹಾಕುವುದು ಮತ್ತು ಕಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಅಳವಡಿಕೆಯಲ್ಲೂ ವ್ಯತ್ಯಯ ಕಂಡುಬಂದಿತ್ತು.

  • ಫೀಡರ್ ಅವಳವಡಿಕೆಯಲ್ಲಿ ನಡೆದಿದ್ದ 12.21 ಕೋಟಿ ರೂ. ಭ್ರಷ್ಟಾಚಾರ
  • 2022ರಲ್ಲೇ ಬಳಿಕ ಮೆಸ್ಕಾಂ ಎಂಡಿ ನೇತೃತ್ವದಲ್ಲಿ ಪೂರ್ಣಗೊಂಡಿದ್ದ ತನಿಖೆ
  • ಕಾಟಾಚಾರಕ್ಕೆ ಇಬ್ಬರು ಕೆಳಹಂತದ ಅಧಿಕಾರಿಗಳ ಅಮಾನತು ಮಾಡಿದ್ದ ಮೆಸ್ಕಾಂ
  • ಭಾರಿ ಅವ್ಯವಹಾರದ ಬಗ್ಗೆ ಗಮನ ಹರಿಸದ ಇಂಧನ ಸಚಿವ ಕೆ.ಜಿ.ಜಾರ್ಜ್

ಶಿವಮೊಗ್ಗ ವಲಯದ ನಿರಂತರ ಜ್ಯೋತಿಯ ಅವ್ಯವಹಾರದ ತನಿಖೆ ಪುರ್ಣಗೊಂಡಿದ್ದು ಹಿಂದಿನ ಎಂಡಿ ಪ್ರಶಾಂತ್ ಮಿಶ್ರಾ ಅವರ ನೇತೃತ್ವದ ಸಮಿತಿಯು ವರ್ಷದ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತನಿಖಾ ವರದಿ ಸರ್ಕಾರದ ಮಟ್ಟದಲ್ಲಿದ್ದು ವರದಿಯಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ.ಡಿ.ಪದ್ಮಾವತಿ, ಮೆಸ್ಕಾಂ ಎಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net