ಜಿಲ್ಲಾ ರೈತ ಸಂಘ (ಗಣಪತಿಯಪ್ಪ ಬಣ) ವಿಲೀನ

dinesh Shiravala (2)
ದಿನೇಶ್ ಶಿರವಾಳ
Published on

ಸಾಗರ: ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವನ್ನು ಕರ್ನಾಟಕ ರಾಜ್ಯ ರೈತ ಸಂಘ ಚೂನಪ್ಪ ಪೂಜಾರಿ ಬಣದ ಜತೆ ವಿಲೀನಗೊಳಿಸುತ್ತಿದ್ದೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.

ರಾಜ್ಯಾದ್ಯಂತ ರೈತ ಸಂಘಗಳು ಒಂದೇ ಸೂರಿನಡಿ ಬರಬೇಕು ಎಂಬ ಉದ್ದೇಶದಿಂದ ರೈತಸಂಘ ಏಕೀಕರಣ ಪ್ರಸ್ತಾಪಕ್ಕೆ ಮನ್ನಣೆ ನೀಡಿ ಡಾ. ಎಚ್.ಗಣಪತಿಯಪ್ಪ ಜಿಲ್ಲಾ ಮತ್ತು ತಾಲೂಕು ಸಂಘವನ್ನು ವಿಲೀನ ಮಾಡುತ್ತಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಪಚ್ಚೆ ನಂಜುಂಡಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನಮ್ಮ ಸಂಘದವರು ಪಾಲ್ಗೊಂಡು ಮಲೆನಾಡು ಭಾಗದ ರೈತರ ಸಮಸ್ಯೆಯನ್ನು ತಿಳಿಸುವ ಜತೆಗೆ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಡಿ.9ರಂದು ನಡೆಯುವ ಚಳಿಗಾಲದ ಅಧಿವೇಶದಲ್ಲಿ ರೈತಸಂಘ ಏಕೀಕರಣದಿಂದ 1 ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆ ಮಾಡುವ ಉದ್ದೇಶವಿದೆ. ನಮ್ಮ ಜಿಲ್ಲೆಯಿಂದ ನೂರಾರು ರೈತರು ಪಾಲ್ಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾಗರ ತಾಲೂಕಿನಲ್ಲಿರುವ ವಿವಿಧ ರೈತ ಸಂಘಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಶೇ.60ಕ್ಕೂ ಹೆಚ್ಚಿನ ಅಡಕೆ ಫಸಲು ನಷ್ಟವಾಗಿದೆ. ಈತನಕ ಬೆಳೆಗಾರರಿಗೆ ಪರಿಹಾರ ನೀಡಿಲ್ಲ. ಸರ್ಕಾರ ಬೆಳೆ ಸಮೀಕ್ಷೆಗೆ ತಕ್ಷಣ ಆದೇಶ ನೀಡಬೇಕು. ಮದ್ಯದಂಗಡಿ ಮಾಲೀಕರು ಪ್ರತಿಭಟನೆ ಮಾಡುತ್ತೇವೆ ಎಂದರೆ ಮುಖ್ಯಮಂತ್ರಿಗಳು ಮಾತುಕತೆಗೆ ಕರೆದು ಸಂಧಾನ ಮಾಡಿಕೊಳ್ಳುತ್ತಾರೆ. ಆದರೆ ಮಲೆನಾಡು ರೈತರು ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದರೂ ಈತನಕ ನಮ್ಮ ಬೇಡಿಕೆ ಈಡೇರಿಸಿಲ್ಲ. ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟಾಸ್ಕ್‌ಫೋರ್ಸ್ ರಚಿಸುತ್ತೇವೆ ಎಂಬ ಭರವಸೆ ನೀಡಿದ್ದು ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖರ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ, ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಭದ್ರೇಶ್, ಕುಮಾರ್ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net