ಹೈಕೋರ್ಟ್  ನಲ್ಲಿ ಮಿಯಾವ್! ಕ್ಯಾಟ್ ಕಿಡ್ನಾಪ್ ಆರೋಪದಲ್ಲಿ ದಾಖಲಾದ ಕೇಸ್ ರದ್ಧತಿಗೆ ಅರ್ಜಿ

highcourt
Published on

ಪವಿತ್ರಾ ಕುಂದಾಪುರ ಬೆಂಗಳೂರು

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿಯೋ ಪ್ರೀತಿ-ಪ್ರೇಮದ ವಿಚಾರಕ್ಕಾಗಿಯೋ ಅಥವಾ ಬೆದರಿಸಿ ಹಣ ವಸೂಲಿಗಾಗಿಯೋ ಮನುಷ್ಯರನ್ನು ಅಪಹರಿಸಿದ ಪ್ರಕರಣ ಪೊಲೀಸ್ ಠಾಣೆ, ಕೋರ್ಟ್ ಕಟಕಟೆಗೇರುವುದನ್ನು ನಾವೆಲ್ಲ ನೋಡಿದ್ದೇವೆ ಕೇಳಿದ್ದೇವೆ. ಆದರೆ, ಬೆಕ್ಕು ಕಿಡ್ನಾಪ್ ಆಗಿರುವ ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿ ಗಂಭೀರ ಹಾಗೂ ಹಾಸ್ಯಭರಿತ ವಾದಕ್ಕೆ ಸಾಕ್ಷಿಯಾಗಿದೆ!


ಹೌದು, ಡೈಸಿ ಎಂಬ ಹೆಸರಿನ ಬೆಕ್ಕನ್ನು ಅಪಹರಿಸಿರುವ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನ ತಹಾ ಹುಸೇನ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿತು. ಕ್ಷುಲ್ಲಕ ಪ್ರಕರಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರುವ ಪೊಲೀಸರ ಕ್ರಮಕ್ಕೆ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.


ಓಹೋ ಬೆಕ್ಕು ಡೈಸಿ ಕಾಣೆಯಾಗಿದೆ. ಅದಕ್ಕಾಗಿ ಹುಡುಕಾಟ. ಬೆಕ್ಕಿಗಾಗಿ ಈ ಪರಿ ಹೋರಾಟ? ಏನು ಈಗಾಗಲೇ ಜಾರ್ಜ್‌ಶೀಟ್ ಹಾಕಿದ್ದಾರಾ? ಪೊಲೀಸರಿಗೆ ಬೇರೆ ಕ್ರೈಮ್ ನೋಡಿ ಎಂದರೆ, ಬೆಕ್ಕು ಅಪಹರಣವಾಗಿರುವ ಬಗ್ಗೆ ಇಷ್ಟು ಆಸಕ್ತಿ ತೋರಿಸಿದ್ದಾರಲ್ಲ ಎಂದು ವಿಚಾರಣೆ ವೇಳೆ ನಗುತ್ತಲೇ ಪೊಲೀಸರನ್ನು ನ್ಯಾಯಮೂರ್ತಿಗಳು ತರಾಟೆ ತೆಗೆದುಕೊಂಡರು.


ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ನೀವು ವಿಚಾರಣೆಗೆ ಸಹಕರಿಸಿ. ತಪ್ಪಿಸಿಕೊಂಡ ಬೆಕ್ಕು ಮರಳಿ ಬರುತ್ತದೆ. ವಿಚಾರಣೆ ಪೂರ್ಣಗೊಳ್ಳದೇ ಹೋದರೆ ಬೆಕ್ಕು ಹಿಂತಿರುಗಿ ಬರುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಅರ್ಜಿದಾರರ ಪರ ವಕೀಲರು, ಈ ಪ್ರಕರಣವನ್ನು ಮುಂದುವರಿಸಿದರೆ ನಮಗೆ ಬಹಳ ಕಷ್ಟವಾಗುತ್ತದೆ. ಏಕೆಂದರೆ ಇಲ್ಲಿ ಬೆಕ್ಕು ಮಾತ್ರವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೇಳುತ್ತಿದ್ದಂತೆ ಇಡೀ ಕಲಾಪವೇ ನಗೆಗಡಲಲ್ಲಿ ತೇಲಾಡಿತು.


ಕೊನೆಗೆ ಈ ರೀತಿಯ ಕ್ಷುಲ್ಲಕ ಪ್ರಕರಣದ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡುವುದರಿಂದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಗಡಿ ದಾಟಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಜತೆಗೆ ಪ್ರಕರಣದ ಸಂಬಂಧ ದೂರುದಾರ ಮಹಿಳೆಗೂ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

ಮನೆಯಿಂದ ಮನೆಗೆ ಹೋಗುವುದು ಸಹಜ.....
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬೆಕ್ಕು ಎಂದ ಮೇಲೆ ಒಂದು ಕಾಂಪೌಂಡ್‌ನಿಂದ ಇನ್ನೊಂದು ಕಾಂಪೌಡ್‌ಗೆ ಸಹಜವಾಗಿ ಓಡಾಡಿಕೊಂಡಿರುತ್ತದೆ. ಅದೇ ರೀತಿಯಾಗಿ ಕಿಟಕಿ ಮೂಲಕ ಆಗಾಗ ಅರ್ಜಿದಾರರ ಮನೆಗೂ ಪ್ರವೇಶಿಸುತ್ತಿತ್ತು. ಆದರೆ, ದೂರುದಾರ ಮಹಿಳೆ ಆರೋಪಿಸಿರುವಂತೆ ಅರ್ಜಿದಾರರು ಬೆಕ್ಕನ್ನು ಅಪಹರಣ ಮಾಡಿ, ಬಂಧಿಸಿಟ್ಟಿಲ್ಲ. ಈ ಬಗ್ಗೆ ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಒಪ್ಪಿಸಲಾಗಿದೆ. ಊರಿನ ಎಲ್ಲರ ಮನೆಗೆ ಹೋಗಿ ಬೆಕ್ಕು ವಾಪಸ್ ಬಂದಿದೆ. ಇದೀಗ ಬರದೇ ಹೋಗಿದ್ದು, ತಮ್ಮ ಬೆಕ್ಕು ಅಪಹರಣವಾಗಿದೆ? ಯಾರೋ ಅಪಹರಿಸಿದ್ದಾರೆ ಎಂದು ಆರೋಪಿಸುವುದು ದೂರುದಾರರಿಗೊಂದು ಕಾಯಕವಾಗಿದೆ. ಈ ಪ್ರಕರಣದಲ್ಲಿ ಯಾವುದೇ ರೀತಿಯ ತಿರುಳಿಲ್ಲ. ಹಾಗಾಗಿ ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದರು.

ದೂರಿನಲ್ಲೇನಿದೆ?
ದೂರುದಾರೆ ನಿಖಿತಾ ಅಂಜನಾ ಅಯ್ಯರ್, ಡೈಸಿ ನನ್ನ ಮುದ್ದಿನ ಬೆಕ್ಕು. ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಿದ್ದೆ. ಈಗ ಅದು ನಾಪತ್ತೆಯಾಗಿದೆ. ಇದರಿಂದಾಗಿ ನಾನು ಅನಗತ್ಯ ಒತ್ತಡ ಮತ್ತು ಭಾವನಾತ್ಮಕ ಆಘಾತಕ್ಕೆ ಒಳಗಾಗಿದ್ದೇನೆ. ನೆರೆಹೊರೆಯವರು ನನ್ನ ಬೆಕ್ಕನ್ನು ಅಪಹರಿಸಿ ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 504, 509ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿ, ನನ್ನ ಬೆಕ್ಕನ್ನು ಸುರಕ್ಷಿತವಾಗಿ ಹಿಂದಿರುಗಿಸಬೇಕು. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು 2022 ೆ.1ರಂದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆನೇಕಲ್ ಜೆಎಂಎ್ಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಅಂಗೀಕರಿಸಿದ್ದ ವಿಚಾರಣಾ ನ್ಯಾಯಾಲಯ, ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿತ್ತು. ಈ ಆದೇಶವನ್ನು ಬದಿಗಿರಿಸಬೇಕು ಹಾಗೂ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net