

ಗಿರೀಶ್ ಗರಗ ಬೆಂಗಳೂರು
ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಸ್ಥಾಪಿಸಲಾಗಿರುವ ‘ಕೋವಿಡ್ ಕೇರ್ ಸೆಂಟರ್’ನಲ್ಲಿ ಸೋಂಕಿತರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ನೀಡುವ ಆಹಾರದ ಮೆನು ಸಿದ್ಧಪಡಿಸಲಾಗಿದೆ. ಅದರಂತೆ 3 ಹೊತ್ತು ಆಹಾರದ ಜತೆಗೆ, 2 ಬಾರಿ ಸ್ನ್ಯಾಕ್ ನೀಡಲು ನಿರ್ಧರಿಸಲಾಗಿದೆ.
ಆಯುರ್ವೆದ ಆಸ್ಪತ್ರೆ, ಹಜ್ ಭವನ ಸೇರಿ ಇನ್ನಿತರ ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ, ರೋಗ ಲಕ್ಷಣವಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.
ಪ್ರತಿ 100 ರೋಗಿಗೆ ಒಬ್ಬ ವೈದ್ಯ: ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಬೇಕಾಗಿರುವ ವೈದ್ಯಕೀಯ ಸಿಬ್ಬಂದಿ ಸೇರಿ ಇನ್ನಿತರ ಸಿಬ್ಬಂದಿ ಎಷ್ಟಿರಬೇಕು ಎಂಬುದನ್ನು ನಿಗದಿ ಮಾಡಲಾಗಿದೆ. ಅದರಂತೆ ಪ್ರತಿ 100 ರೋಗಿಗಳಿಗೆ 8 ಗಂಟೆ ಪಾಳಿಯಲ್ಲಿ ಕೆಲಸ ಮಾಡುವ ಒಬ್ಬರು ವೈದ್ಯರನ್ನು, 50 ರೋಗಿಗಳಿಗೆ 8 ಗಂಟೆಯ ಪಾಳಿಯಲ್ಲಿ ಕೆಲಸ ಮಾಡಲು ಒಬ್ಬ ನರ್ಸ್, ಪ್ರತಿ 100 ರೋಗಿಗಳಿಗೆ ಆಹಾರ ಸೇರಿ ಇನ್ನಿತರ ವ್ಯವಸ್ಥೆ ಮಾಡುವ ಸಲುವಾಗಿ ಒಬ್ಬ ಸಹಾಯಕರನ್ನು ನೇಮಿಸಲು ಇಲಾಖೆ ನಿರ್ಧರಿಸಿದೆ. ಜತೆಗೆ 50 ರೋಗಿಗಳಿಗೆ 12 ಗಂಟೆ ಪಾಳಿಯಲ್ಲಿ ಕೆಲಸ ಮಾಡುವ ಒಬ್ಬರು ಸ್ವಚ್ಛತಾ ಸಿಬ್ಬಂದಿ, ಡಾಟಾ ಎಂಟ್ರಿ ಸಿಬ್ಬಂದಿ, 50 ಜನರಿಗೆ ಒಬ್ಬರಂತೆ ಭದ್ರತಾ ಸಿಬ್ಬಂದಿ ನೇಮಿಸಲಾಗುತ್ತದೆ.