ರಂಗಭೂಮಿಯಿಂದ ಮಾನಸಿಕ ಆರೋಗ್ಯ

sahyadri
ರಂಗ ತರಬೇತಿ ಕಾರ್ಯಾಗಾರವನ್ನು ಚಂದ್ರಶೇಖರ ಹಿರೇಗೋಣಿಗೆರೆ ಉದ್ಘಾಟಿಸಿದರು. ಡಾ. ಸೈಯದ್ ಸನಾವುಲ್ಲಾ, ಅಜಯ್ ನೀನಾಸಂ, ಡಾ.ಕೆ.ಎನ್. ಮಂಜುನಾಥ್ ಇದ್ದರು.
Published on

ಶಿವಮೊಗ್ಗ: ರಂಗಭೂಮಿ ಅವಕಾಶ ಕಲ್ಪಿಸುವ ಜತೆಗೆ ಶಿಸ್ತು ಕಲಿಸುತ್ತದೆ. ಮಾನವೀಯ ಗುಣ ಮರೆಯಾಗುತ್ತಿರುವ ಸಂದರ್ಭದಲ್ಲಿ ರಂಗಭೂಮಿಯಿಂದ ಒಳ್ಳೆಯತನ, ಮಾನಸಿಕ ಆರೋಗ್ಯ ಸಿಗುತ್ತದೆ. ಅಷ್ಟೇ ಅಲ್ಲ, ಧರ್ಮ, ಜಾತಿಗಳನ್ನು ಮೀರಿ ಮನುಷ್ಯನನ್ನು ಬೆಳೆಸುತ್ತದೆ ಎಂದು ನಟ ಚಂದ್ರಶೇಖರ ಹಿರೇಗೋಣಿಗೆರೆ ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಸ್ಕ್ ಚಲುವರಂಗ ಅಭಿನಯ ಶಾಲೆ, ಸಹ್ಯಾದ್ರಿ ಕಲಾ ಕಾಲೇಜು ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಟ ಪಾತ್ರದ ಮೂಲಕ ಗುರುತಿಸಿಕೊಳ್ಳಬೇಕು. ಅನೇಕ ಬಾರಿ ಪಾತ್ರ ಸೋತು ನಟ ಗೆಲ್ಲುತ್ತಾನೆ. ಪಾತ್ರವೇ ಗೆದ್ದು ನಟನೇ ಸೋಲುವುದುಂಟು. ರಂಗಭೂಮಿ ಸರಿಯಾದ ದಿಕ್ಕಿನತ್ತ ಮನುಷ್ಯನನ್ನು ಸಾಗಿಸುತ್ತದೆ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್ ಮಾತನಾಡಿ, ಪ್ರತಿಭೆ ಅನಾವರಣಗೊಳಿಸಲು ರಂಗಕ್ಷೇತ್ರ ಸಹಾಯಕವಾಗುತ್ತದೆ. ಕಾಲೇಜುಗಳಲ್ಲಿ ಇಂತಹ ಶಿಬಿರಗಳು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಆಸ್ಕ್ ಚಲುವರಂಗದ ಸಂಸ್ಥಾಪಕ ಮತ್ತು ತರಬೇತಿದಾರ ಅಜಯ್ ನೀನಾಸಂ ಮಾತನಾಡಿ, ರಂಗಕ್ಷೇತ್ರ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ. ಆಳವಾಗಿ ಅಧ್ಯಯನ ಮಾಡಲು, ನೆನಪಿನ ಶಕ್ತಿ ಹೆಚ್ಚಿಸಲು ತನ್ನನ್ನು ತಾನು ಅರಿಯಲು, ಇತರರನ್ನು ಗೌರವಿಸಲು ರಂಗಕ್ಷೇತ್ರ ಅನುಕೂಲವಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಸೈಯದ್ ಸನಾವುಲ್ಲಾ ಮಾತನಾಡಿ, ಪಠ್ಯಗಳಲ್ಲಿ ಫಿಲ್ಮ್ ಸ್ಟಡಿ ಅಧ್ಯಯನ ಕೂಡ ಮಾಡಬೇಕಾಗಿದೆ. ರಂಗ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ದೃಷ್ಟಿಯಿಂದ ಕುವೆಂಪು ವಿವಿಯಲ್ಲಿ ಸಿನಿಮಾ ಅಧ್ಯಯನವನ್ನು ಒಂದು ವಿಷಯವನ್ನಾಗಿ ಬೋಧಿಸಲು ವಾತಾವರಣ ಕಲ್ಪಿಸಬೇಕೆಂದು ಸಹ್ಯಾದ್ರಿ ಕಾಲೇಜಿನಿಂದ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net