

ಹುಣಸೂರು: ಮಾನಸಿಕ ಅಸ್ವಸ್ಥರನ್ನು ಅಸ್ಪಶ್ಯರಂತೆ ನೋಡುವ ಮನೋಭಾವದಿಂದ ನಾವೆಲ್ಲರೂ ದೂರಾಗಬೇಕಿದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಘಟಕದ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ವಿಶ್ವ ರೇಬಿಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಶೇ.13ರಷ್ಟು ಜನ ಮಾನಸಿಕ ಅಸ್ವಸ್ಥರಾಗಿದ್ದಾರೆಂದು ಸಮೀಕ್ಷೆ ತಿಳಿಸುತ್ತದೆ. ಆಧುನಿಕ ಜೀವನಶೈಲಿಯ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಮಾನಸಿಕ ಒತ್ತಡದಿಂದ ಜೀವನ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಮನುಷ್ಯನಲ್ಲಿ ಮಾನಸಿಕ ಒತ್ತಡದಿಂದ ಖಿನ್ನತೆ, ಅಸ್ವಸ್ಥತೆ ಮುಂತಾದ ಲಕ್ಷಣ ಕಾಣಬಹುದಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಮನದಾಳದ ನೋವನ್ನು ಆಪ್ತರಲ್ಲಿ ಹಂಚಿಕೊಂಡು ಹಗುರಾದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿ ಕೊಳ್ಳಬಹುದಾಗಿದೆ. ಸಮಾಜದ ಸ್ವಾಸ್ಥ್ಯ ಆರೋಗ್ಯಪೂರ್ಣವಾಗಿರಲು ಎಲ್ಲರೂ ತಮ್ಮ ಇತಿಮಿತಿಯಲ್ಲೇ ಕರ್ತವ್ಯ ನಿರ್ವಹಿಸಿದಲ್ಲಿ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ನೊಂದವರಿಗೆ ಉಚಿತ ಕಾನೂನು ಸಲಹೆ ಮತ್ತು ಸೇವೆ ನೀಡುತ್ತದೆ ಎಂದರು.
ತಾಲೂಕು ಸಂಚಾರಿ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ಅವರು ರೇಬಿಸ್ ಕಾಯಿಲೆ ಕುರಿತು ಮಾಹಿತಿ ಒದಗಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ.ಮನು ಪಟೇಲ್, ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ ಮಾತನಾಡಿದರು. ಉಪಾಧ್ಯಕ್ಷ ಬಿ.ಸಿ.ಸುಂದರೇಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಟಿ.ಚಂದ್ರಶೇಖರ್, ಪ್ರಾಂಶುಪಾಲ ನಾಗರಾಜೇ ಅರಸ್, ಸಂಪನ್ಮೂಲ ವ್ಯಕ್ತಿ ಎಸ್.ವೆಂಕಟೇಶ್, ಗ್ರಾಮ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ನಾಗೇಂದ್ರಸ್ವಾಮಿ, ತಾಲೂಕು ಸಂಯೋಜಕರಾದ ಪ್ರೇಮಾ, ವಸಂತಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಟಿಇಸಿ ನಗರ ಸಂಯೋಜಕಿ ಎಸ್.ಪುಷ್ಪವತಿ ಹಾಗೂ ಕಾಲೇಜಿನ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.