

ಬೆಂಗಳೂರು: ವಿಧಾನಸೌಧದ ಬಳಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಅವರು ಸಭಾಪತಿಗಳು, ಸಚಿವರು, ಉನ್ನತಾಧಿಕಾರಿಗಳನ್ನು ಒಳಗೊಂಡ ಸಭೆ(A meeting of high officials on the problem of stray dogs near Vidhana Soudha) ನಡೆಸಿದರು.
ಸಭೆ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಮನುಷ್ಯರಿಗೆ ಬದುಕಲು ಎಷ್ಟು ಹಕ್ಕು ಇದೆಯೋ, ಅದೇ ರೀತಿ ಇತರ ಪ್ರಾಣಿಗಳಿಗೂ ಹಕ್ಕು ಇದೆ. ಇಲ್ಲಿರುವ ನಾಯಿಗಳನ್ನು ಇಲ್ಲಿಯೇ ಇರಲು ಬಿಡಬೇಕು ಎಂದು ಒಂದಷ್ಟು ಜನ ಹೇಳುತ್ತಿದ್ದಾರೆ. ಇಲ್ಲಿಂದ ಅವುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆಯೂ ಹಲವರು ಸಲಹೆ ನೀಡಿದ್ದಾರೆ. ಎಲ್ಲ ಪರ-ವಿರೋಧ ಅಭಿಪ್ರಾಯಗಳನ್ನು ಪ್ರತಿಪಕ್ಷ, ಆಡಳಿತ ಪಕ್ಷಗಳ ಸದಸ್ಯರ ಮಾತುಗಳನ್ನು ಕ್ರೋಢೀಕರಿಸಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ನಮ್ಮ ವ್ಯಾಪ್ತಿಯಲ್ಲಿ ಎಷ್ಟು ನಾಯಿಗಳು ಇವೆ. ಯಾವೆಲ್ಲ ವಯಸ್ಸಿನ ಶ್ವಾನಗಳು ಇವೆ. ಅವೆಲ್ಲವೂ ಸುರಕ್ಷಿತವಾಗಿವೆಯಾ ಎಂಬುದನ್ನು ತಜ್ಞರ ತಂಡ ಅಧ್ಯಯನ ಮಾಡಲಿದೆ ಎಂದು ತಿಳಿಸಿದರು. ನಾಯಿಗಳನ್ನು ಇಡಲೆಂದೇ ಒಂದು ಜಾಗ ಕೊಟ್ಟು, ಅವುಗಳನ್ನು ನಿಭಾಯಿಸಲು ಎನ್‌ಜಿಒ ಗಳಿಗೆ ಕೊಡುತ್ತೇವೆ. ಪ್ರಾಣಿ ದಯಾ ಸಂಘ ಸೇರಿ ಬೇರೆ ಬೇರೆ ಸಂಘ-ಸಂಸ್ಥೆಗಳಿಗೆ ಕೂಡ ಜವಾಬ್ದಾರಿ ನೀಡುತ್ತೇವೆ. ಇಲ್ಲಿಗೆ ಬರುವ ಜನರಿಗೆ ನಾಯಿಗಳು ತೊಂದರೆ ಕೊಡದಂತೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ನಾಯಿಗಳಿಗೆ ಶೆಲ್ಟರ್ ಕಟ್ಟುವಂತೆ ಹೇಳಿದ್ದೇವೆ. ನಾಯಿಗಳಿಗೆ ಕಟ್ಟಡವೂ ಇಲ್ಲ. ನೆರಳೂ ಇಲ್ಲ. ಶೆಲ್ಟರ್ ಇಲ್ಲದ ಕಾರಣ ಮಳೆಗಾಲದಲ್ಲಿ ಎಲ್ಲವೂ ಒಳಗೇ ಬರುತ್ತವೆ. ಅವುಗಳಿಗೆಂದೇ ಒಂದು ಶೆಲ್ಟರ್ ಕಟ್ಟಿಕೊಟ್ಟರೆ ಒಳಗೆ ಬರುವುದಿಲ್ಲ. ಶೆಲ್ಟರ್ ನಿರ್ಮಾಣ ಮಾಡಲು ಎಷ್ಟು ಖರ್ಚು ಬರಲಿದೆ ಎಂಬುದನ್ನು ತಿಳಿಸುವಂತೆ ಲೋಕೋಪಯೋಗಿ ಇಲಾಖೆಯವರಿಗೆ ಹೇಳಿದ್ದೇವೆ. ನಾಯಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವುದಿಲ್ಲ ಎಂದು ಖಾದರ್ ಸ್ಪಷ್ಟಪಡಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನಸೌಧದ ಬಳಿ ನಾಯಿಗಳು ಇವೆ. ಅವುಗಳನ್ನು ಇಲ್ಲಿಯೇ ಸಾಕಲು ನಿರ್ಧಾರ ಮಾಡಿದ್ದೇವೆ. ಏನು ಮಾಡುತ್ತೇವೆ. ಅವುಗಳಿಗೆ ಏನು ಹಾಕುತ್ತೇವೆ ಎಂಬುದು ಬೇರೆ ವಿಚಾರ. ಪರ-ವಿರೋಧ ಇದ್ದೇ ಇರುತ್ತವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ನಾಯಿಗಳನ್ನು ಸಾಕಲಾಗಿದೆ. ನಾವೀಗ ಆ ನಾಯಿಗಳಿಗೆ ಪ್ರತ್ಯೇಕ ಶೆಲ್ಟರ್ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ನಾವೆಲ್ಲರೂ ಇಲ್ಲಿಗೆ ವಾಕಿಂಗ್ ಬಂದಿದ್ದೇವೆ. ನಾಯಿಗಳು ಏನೂ ಮಾಡಿಲ್ಲ. ನಾಯಿಗಳು ಅಟ್ಯಾಕ್ ಮಾಡುತ್ತವೆ ಎಂದು ಎಲ್ಲಿಯೂ ಯಾರೂ ದೂರು ನೀಡಿಲ್ಲ. ನಮ್ಮನ್ನು ಕಂಡ ತಕ್ಷಣ ಹತ್ತಿರ ಬರುತ್ತವೆ. ಊಟ ಹಾಕಲಿ ಎಂದು ಅವು ನಮ್ಮ ಬಳಿ ಬರುತ್ತವೆ. ಊಟ ಹಾಕುತ್ತಿದ್ದಂತೆ ಅವು ಹೊರಟು ಹೋಗುತ್ತವೆ. ಇಲ್ಲಿ ಯಾರಿಗೂ ಏನೂ ಮಾಡಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಯಿಗಳು ವಿಧಾನಸೌಧದ ಆವರಣದಲ್ಲಿ ಇದ್ದರೂ ಯಾವ ರೀತಿ ನಿಯಂತ್ರಣ ಮಾಡಬೇಕು, ನಾಯಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗಬಾರದು. ಆ ಬಗ್ಗೆ ಯಾವ ರೀತಿ ಕ್ರಮ ಅಂತ ಚರ್ಚೆ ಮಾಡಲಾಗಿದೆ. ಆಂಟಿ ರೇಬೀಸ್ ಲಸಿಕೆ ಬಗ್ಗೆ ಹೇಳಿದ್ದೇವೆ. ವೈಜ್ಞಾನಿಕ ಹಾಗು ಕಾನೂನು ಬದ್ಧವಾಗಿ ಶೆಲ್ಟರ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಸ್ಥಳಾಂತರ ಮಾಡಲು ಅವಕಾಶವಿಲ್ಲ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.