ವಾಯು ಮಾಲಿನ್ಯದ ಆಪತ್ತು: ಹಸಿರು ಜೀವನಶೈಲಿ ಅಗತ್ಯ

Air Pollution 1
Published on

ವಾಯುಮಾಲಿನ್ಯದ ಸ್ಥಿತಿ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ಹಲವು ದಶಕಗಳಿಂದ ತೋರಿದ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಬಹುದು. ಮಕ್ಕಳ ಆರೋಗ್ಯದ ಮೇಲೂ ವಾಯುಮಾಲಿನ್ಯ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಅಸ್ತಮಾಗೆ ತುತ್ತಾಗುತ್ತಿದ್ದಾರೆ.

ಆಧುನಿಕತೆಯ ಪ್ರಕ್ರಿಯೆ ಶರವೇಗದಲ್ಲಿ ಮುನ್ನುಗುತ್ತಿದ್ದರೆ ಮತ್ತೊಂದೆಡೆ ಪ್ರಕೃತಿ ಮೇಲಿನ ಶೋಷಣೆ ಹೆಚ್ಚುತ್ತಿದೆ. ಅಭಿವೃದ್ಧಿ ಮತ್ತು ಪರಿಸರ ಎರಡೂ ಸಮತೋಲನ ದಲ್ಲಿ ಸಾಗಬೇಕು. ನಿಸರ್ಗಕ್ಕೆ ಹಾನಿ ಎಸಗಿದರೆ ಅದರಿಂದಾಗುವ ಆಪತ್ತುಗಳು ಒಂದೆರಡಲ್ಲ. ಎಷ್ಟಾದರೂ ಅಭಿವೃದ್ಧಿ ಸಾಧಿಸಿ, ನೀರು, ಗಾಳಿ, ಆಹಾರವನ್ನೇ ವಿಷಮಯವಾಗಿಸಿಕೊಂಡರೆ ಏನು ಪ್ರಯೋಜನ? ಈ ಬಗ್ಗೆ ಪ್ರಕೃತಿಯೇ ಹಲವು ಬಾರಿ ಎಚ್ಚರಿಕೆ ಗಂಟೆ ಮೊಳಗಿಸಿದೆ, ಸಾಗಬೇಕಾದ ದಾರಿಯನ್ನು ಬದಲಿಸಬೇಕಿದೆ ಎಂದು ಪರಿಸರ ತಜ್ಞರು ಹೇಳಿಯಾಗಿದೆ. ಆದರೆ, ಎಚ್ಚೆತ್ತುಕೊಳ್ಳುವ ಲಕ್ಷಣಗಳಿಲ್ಲ.

ಆತಂಕಕಾರಿ ಸಂಗತಿಗಳು: ಭಾರತದಲ್ಲಿ ವಾಯುಮಾಲಿನ್ಯದ ಪ್ರಮಾಣ ಭೌಗೋಳಿಕವಾಗಿ ವಿಸ್ತರಣೆಯಾಗಿದೆ ಮತ್ತು ಉತ್ತರ ಭಾರತದಲ್ಲಿ ಇದೇ ಪ್ರಮಾಣ ಮುಂದುವರಿದರೆ ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ ಒಂಬತ್ತಕ್ಕೂ ಹೆಚ್ಚಿನ ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕಕಾರಿ ವಿಚಾರವನ್ನು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ ಟಿಟ್ಯೂಟ್​ನ 2022ನೇ ವರ್ಷದ ಅಧ್ಯಯನ ವರದಿ ಬಹಿರಂಗಗೊಳಿಸಿತ್ತು. ಪ್ರತಿ 10 ಲಕ್ಷ ಜನರಲ್ಲಿ 18 ಸಾವಿರ ಜನರು ವಾಯುಮಾಲಿನ್ಯದ ಕಾರಣ ವಿವಿಧ ರೋಗ, ತೊಂದರೆಗೆ ಸಿಲುಕಿ ಮೃತರಾಗುತ್ತಿದ್ದಾರೆ. ಇದು ವಿಶ್ವದಲ್ಲೇ ಗರಿಷ್ಠ ಮಟ್ಟವಾಗಿದೆ ಎಂಬುದು ಕಳವಳದ ಸಂಗತಿ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ. ಈ ಎರಡೂ ರಾಜ್ಯಗಳಲ್ಲಿ ವ್ಯಕ್ತಿಯ ಸರಾಸರಿ ಆಯಸ್ಸು 2.5ರಿಂದ 2.9 ವರ್ಷಗಳಷ್ಟು ಕಡಿಮೆಯಾಗಲು ವಾಯುಮಾಲಿನ್ಯವೇ ಕಾರಣವಾಗಿದೆ.

ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅಪಾಯದ ಮಟ್ಟ ಮೀರುತ್ತಿದೆ. ಭಾರತದ ಸುಮಾರು 14 ಕೋಟಿ ಜನರು ಎಕ್ಯುಐನ ಅಪಾಯಕಾರಿ ಮಟ್ಟಕ್ಕಿಂತ 10ರಿಂದ 15 ಪಟ್ಟು ಹೆಚ್ಚು ಮಾಲಿನ್ಯ ಹೊಂದಿರುವ ಗಾಳಿ ಸೇವಿಸುತ್ತಿದ್ದಾರೆ. ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆಯಿಂದ ಶೇಕಡ 50, ವಾಹನಗಳಿಂದ ಬರುವ ಹೊಗೆಯಿಂದ ಶೇ. 25, ಬೆಳೆಯ ಕಳೆ ಸುಡುವುದರಿಂದ ಶೇಕಡ 15, ಕಸ ಸುಡುವುದರಿಂದ ಶೇ. 15ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂಬುದು ತಜ್ಞರ ಅಂಬೋಣ.

ನಾವು ಉಸಿರಾಡುವ ಗಾಳಿಯಲ್ಲಿ ಗಂಧಕದ ಡೈಆಕ್ಸೈಡ್​, ಸಾರಜನಕ ಡೈಆಕ್ಸೈಡ್​, ಇಂಗಾಲದ ಮೊನಾಕ್ಸೈಡ್ (ಇದಂತೂ ಭಾರಿ ವಿಷಕಾರಕ) ಸೀಸ, ಜತೆಗೆ ಕ್ಲೋರೋಫೋರಾ ಕಾರ್ಬನ್ (ಇದು ಓಜೋನ್ ಪದರಕ್ಕೆ ಹಾನಿ ಮಾಡುತ್ತದೆ) ಸೇರಿಕೊಂಡಿವೆ. ವಾಯುಮಾಲಿನ್ಯ ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಪರಿಹಾರದ ದಾರಿಯಲ್ಲಿ ಬಲವಾದ ಹೆಜ್ಜೆಗಳನ್ನು ಇರಿಸದಿದ್ದರೆ, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಪಾಯ ಎದುರಿಸ ಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಅಲ್ಲದೆ, ಈ ನಿಟ್ಟಿನಲ್ಲಿ ಜನರ ಸಹಕಾರ ಸಿಗುವವರೆಗೆ, ಜನರು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳು ವವರೆಗೆ ದೊಡ್ಡ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ.

ಭಾರತದಲ್ಲಿ ನಿಯಂತ್ರಣ ಕ್ರಮ

  • ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ ಮತ್ತು ರಾಷ್ಟ್ರ ರಾಜಧಾನಿ ವಲಯದ ವಾಯು ಗುಣಮಟ್ಟ ಆಯೋಗ ರಚನೆ
  • ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧಿಕಾರ
  • ಗುಜರಾತಿನಿಂದ ದೆಹಲಿಯವರೆಗಿನ ಅರಾವಳಿ ಬೆಟ್ಟಗಳ 155 ಕಿ.ಮೀ. ವ್ಯಾಪ್ತಿಯಲ್ಲಿ 150 ಕೋಟಿ ಗಿಡಗಳನ್ನು ನೆಡುವ ಬೃಹತ್ ಯೋಜನೆ ಆರಂಭವಾಗಿದೆ.
  • ಸಮ ಮತ್ತು ಬೆಸ ವಾಹನಗಳ ಸಂಚಾರದ ಪ್ರಯೋಗವೂ ನಡೆದಿದೆ.
  • ಪಟಾಕಿ ನಿಷೇಧ ಮಾಡಲಾಗಿದೆ.

ಬಡದೇಶಗಳಿಗೆ ಹೊರೆ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ವಾಯುಮಾಲಿನ್ಯದಿಂದ ಆರೋಗ್ಯ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ ಅಪಾರವಾಗಿರುತ್ತದೆ. ಪರಿಸ್ಥಿತಿ ಹೀಗಿದ್ದರೂ ಮಾಲಿನ್ಯ ತಡೆ ವಿಚಾರವನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಅಜೆಂಡಾ ಬಹುತೇಕವಾಗಿ ನಿರ್ಲಕ್ಷಿಸಿದೆ ಎನ್ನುತ್ತಾರೆ ‘ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್’ ಅಧ್ಯಯನ ವರದಿಯ ತಜ್ಞರು.

ಗಂಗಾ ನದಿ ಬಯಲಿನಲ್ಲಿ ಭೀಕರ

ಉತ್ತರ ಭಾರತದಲ್ಲಿ ಗಂಗಾ ನದಿ ಬಯಲಿನಲ್ಲಿ ವಾಯುಮಾಲಿನ್ಯ ಭೀಕರ ಪ್ರಮಾಣದಲ್ಲಿದೆ. ಇಲ್ಲಿ ಇಂಧನ, ಜನಸಂಚಾರ, ಕೈಗಾರಿಕೆ, ಕೃಷಿ ಮತ್ತು ಇತರ ಚಟುವಟಿಕೆಗಳಿಂದಾಗಿ ಸ್ಥಳವಿನ್ಯಾಸ ಮತ್ತು ಹವಾಮಾನ ಸಾಂದ್ರಿತ ಮಾಲಿನ್ಯ ಇರುತ್ತದೆ. ಮನೆಗಳಲ್ಲಿ ಬೆರಣಿಯಂಥ ಜೈವಿಕವಸ್ತುಗಳನ್ನು ಒಲೆಗಳಲ್ಲಿ ಬಳಸುವುದು ಭಾರತದಲ್ಲಿ ವಾಯುಮಾಲಿನ್ಯ ಸಾವಿನ ಅತಿ ದೊಡ್ಡ ಮೂಲವಾಗಿದೆ. ಕಲ್ಲಿದ್ದಲು ಉರಿಸುವುದು ಹಾಗೂ ಬೆಳೆ ಸುಡುವುದು ನಂತರದ ಎರಡು ಪ್ರಮುಖ ಕಾರಣಗಳು.

ಕೂಳೆ ಸುಡುವಿಕೆ ಪ್ರಮಾಣ ಏರುಮುಖ

ಪಂಜಾಬ್ ಮತ್ತು ಹರಿಯಾಣದಲ್ಲಿ ಸ್ಯಾಟ್​ಲೈಟ್​ಗಳ ಕಣ್ಣಿಂದ ತಪ್ಪಿಸಿಕೊಳ್ಳಲು ರೈತರು ರಾತ್ರಿ ಹೊತ್ತಿನಲ್ಲಿ ಕೂಳೆ (ಕೃಷಿಬೆಳೆ ಅವಶೇಷ) ಸುಡುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 15ರಿಂದ ನವೆಂಬರ್ 7ರವರೆಗೆ ಪಂಜಾಬಿನಲ್ಲಿ ಇಂಥ 21 ಸಾವಿರ ಪ್ರಕರಣಗಳು ನಡೆದಿವೆ. ಹರಿಯಾಣದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

ದೆಹಲಿಗೆ ಸಂಕಷ್ಟ

ವಾಯುಮಾಲಿನ್ಯದ ಕಾರಣ ರಾಜಧಾನಿ ದೆಹಲಿಯಲ್ಲಿ 2020ರಲ್ಲಿ 54 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ‘ಗ್ರೀನ್ ಪೀಸ್’ ಪರಿಸರ ಸಂಸ್ಥೆ ವರದಿ ಹೇಳಿತ್ತು. ಈ ಗಂಭೀರ ಎಚ್ಚರಿಕೆಯ ಬಳಿಕವಾದರೂ, ಪರಿಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ವರ್ಷದಿಂದ ವರ್ಷಕ್ಕೆ ದೆಹಲಿ ಸ್ಥಿತಿ ಬಿಗಡಾಯಿಸುತ್ತಿದೆ. ಶಾಲಾ ಮಕ್ಕಳಿಗೆ ಚಳಿಗಾಲದ ರಜೆಯನ್ನು ಅವಧಿಯ ಮುನ್ನವೇ ನೀಡಲಾಗಿದೆ. ವಾಹನ ಸಂಚಾರಕ್ಕೆ ‘ಸಮ-ಬೆಸ ಸಂಖ್ಯೆ’ಯ ಪ್ರಯೋಗ ಮತ್ತೊಮ್ಮೆ ಮಾಡಲಾಗುತ್ತಿದೆ. ವಾಯುಮಾಲಿನ್ಯ ನಿಯಂತ್ರಣದಲ್ಲಿದ್ದರೆ 2020ರಲ್ಲಿ ದೆಹಲಿಯಲ್ಲಿ 18 ಸಾವಿರ, ಬೆಂಗಳೂರಿನಲ್ಲಿ 12 ಸಾವಿರ ಜೀವಗಳನ್ನು ಉಳಿಸಬಹುದಿತ್ತು ಎಂದು ‘ಗ್ರೀನ್ ಪೀಸ್’ನ ವರದಿ ಪ್ರಸ್ತಾಪಿಸಿತ್ತು.

ಮುಂಬೈಯಲ್ಲಿ ಹೆಚ್ಚು

ರಾಜಧಾನಿ ದೆಹಲಿ ಬಳಿಕ ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಹೊರಡಿಸಿರುವ ಮಹಾರಾಷ್ಟ್ರ ಸರ್ಕಾರ, ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಿದೆ. ಈ ಮಧ್ಯೆ, ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ, ಇದರಿಂದ ಧೂಳು ಮತ್ತು ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು ಆರೋಪಿಸಿರುವ ಪರಿಸರವಾದಿ ಡಿ. ಸ್ಟಾಲಿನ್ ಈ ಕುರಿತಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಸುಪ್ರೀಂ ಖಡಕ್ ಸೂಚನೆ

ವಾಯುಮಾಲಿನ್ಯದಿಂದ ಜನ ಸಾಯಲು ನಾವು ಅವಕಾಶ ಮಾಡಿಕೊಡುವುದಿಲ್ಲ. ವಾಯುಮಾಲಿನ್ಯ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್, ನೀವು ಕ್ರಮ ಕೈಗೊಳ್ಳದಿದ್ದರೆ ನಾವೇ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ, ಕೃಷಿತ್ಯಾಜ್ಯ ಸುಡದಂತೆ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕರ್ನಾಟಕ ಸದ್ಯಕ್ಕೆ ಸುರಕ್ಷಿತ

ರಾಷ್ಟ್ರ ರಾಜಧಾನಿ ದೆಹಲಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮಾಲಿನ್ಯ ಪ್ರಮಾಣದಲ್ಲಿ ಸುರಕ್ಷಿತವಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ನಗರಗಳಲ್ಲಿ ಕಡಿಮೆ ವಾಯುಮಾಲಿನ್ಯವಿದೆ. ರಾಜ್ಯದ ಇತರ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿಲ್ಲ.

ಪರಿಹಾರದ ಹೆಜ್ಜೆಗಳು

  • ಕೈಗಾರಿಕೆಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
  • ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚು ಒತ್ತು ನೀಡುವುದು.
  • ರೈತರು ಕಳೆ ವಿಲೇವಾರಿಗೆ ಪರ್ಯಾಯ ಕ್ರಮ ಅನುಸರಿಸುವುದು.
  • ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಿಸಲು ಮರಗಿಡಗಳನ್ನು ಬಳಸುವ ಪ್ರಯತ್ನಗಳು ಆಂದೋಲನ ಸ್ವರೂಪದಲ್ಲಿ ನಡೆಯಬೇಕು.
  • ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ನೀತಿಗಳು ಕೂಡ ಇನ್ನಷ್ಟು ಬಿಗಿಯಾಗಬೇಕು.
  • ನಾವು ವಾಸಿಸುವ ಪ್ರದೇಶ ಹಾಗೂ ಸುತ್ತಲಿನ ವಾತಾವರಣದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮತ್ತು ಸಾಂಸ್ಥಿಕವಾಗಿ ಕೆಲಸ ಮಾಡುವುದು ಅಗತ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net