7ಕ್ಕೂ ಅಧಿಕ ಸ್ಮಾರಕಗಳ ದತ್ತು ಪತ್ರ ಹಸ್ತಾಂತರ: ಸಚಿವ ಪಾಟೀಲ

hk PATIL
Published on

ಬೆಂಗಳೂರು: ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಸ್ಮಾರಕ ದತ್ತು ಯೋಜನೆಯಡಿ 7ಕ್ಕೂ ಅಧಿಕ ಸ್ಮಾರಕಗಳನ್ನು ದತ್ತು ನೀಡಲಾಗಿದೆ. ಸ್ಮಾರಕ ದತ್ತು ಯೋಜನೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಚಾಲನೆ ನೀಡಿದ್ದಾರೆ.

ಬೀದರ್‌ನಿಂದ ಆರಂಭಗೊಂಡ ಸ್ಮಾರಕ ದತ್ತು ಯೋಜನೆ ಜಾರಿಯ ಪ್ರಯಾಣ ಯಾದಗಿರಿಯಲ್ಲಿ ಅಂತ್ಯಗೊಳ್ಳುವ ಮೂಲಕ ಮೊದಲ ಹಂತದ ನಮ್ಮ ಸ್ಮಾರಕ ದರ್ಶನ ಮತ್ತು ಸ್ಮಾರಕಗಳ ರಕ್ಷಣೆಗಾಗಿ ಪ್ರವಾಸಯಶಸ್ವಿಯಾಗಿ ಪೂರ್ಣಗೊಂಡಿದೆ.

ಬೀದರ್‌ನ ಅಷ್ಟಕೋನಾಕಾರದ ಬಾವಿ ವೀಕ್ಷಣೆ ನಂತರ ನರಸಿಂಹ ಝರಾಣದಲ್ಲಿ ದೇಗುಲ ದರ್ಶನದೊಂದಿಗೆ ಆರಂಭವಾದ ನಮ್ಮ ಸ್ಮಾರಕ ದರ್ಶನ ಮತ್ತು ಸ್ಮಾರಕಗಳ ರಕ್ಷಣೆಗೆ ಪ್ರವಾಸ ಅಡಿಯಲ್ಲಿ ಸಚಿವರ ನೇತೃತ್ವದ ನಿಯೋಗವು ಸುರಂಗ ಮಾರ್ಗದ ನೀರಿನ ಕರೇಜ್ನ್ನು ವೀಕ್ಷಿಸಿತು.

ಇರಾನ್ ದೇಶದಲ್ಲಿ ಮಾತ್ರ ಕಂಡು ಬರುವ ಈ ಸುರಂಗ ನೀರಿನ ಕಾಲುವೆಗಳು ಭಾರತದ ಬೀದರ್ ಮತ್ತು ವಿಜಯಪುರದಲ್ಲಿ ಮಾತ್ರ ಇದೆ. ಇತಿಹಾಸ ಪ್ರಸಿದ್ಧ ಮತ್ತು ನೂರಾರು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಸುರಂಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸುವ ಯೋಜನೆ ರೂಪಿಸಲು ಸಚಿವರು ನಿರ್ಧಸಿರಿಸಿದ್ದು ರೂಪು ರೇಷೆ ರೂಪಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಬಸವ ಕಲ್ಯಾಣ ಮತ್ತು ಕೂಡಲ ಸಂಗಮ ಅನುಭವ ಮಂಟಪಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅರಣ್ಯ, ಪರಿಸರ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಅರವಿಂದ ಅರಳಿ, ಭೀಮರಾವ್ ಪಾಟೀಲ್ ಉಪಸ್ಥಿತರಿದ್ದರು.

ನಾಗಾವಿ ದೇವಾಲಯ ದತ್ತು

ಕಲಬುರಗಿಯ ನಾಗಾವಿಯಲ್ಲಿ ಇತಿಹಾಸ ಪ್ರಸಿದ್ದ ದೇವಾಲಯ ಸಂಕಿರ್ಣ ವೀಕ್ಷಿಸಿದ ಸಚಿವರು, ರಾಷ್ಟಕೂಟರ ರಾಜ್ಯಭಾರದಲ್ಲಿ ನಾಗಾವಿಯು ಉನ್ನತ ವ್ಯಾಸಂಗದ ಕೇಂದ್ರ ವಾಗಿತ್ತು ಮತ್ತು ಇಲ್ಲಿನ 60 ಕಂಬಗಳ ರಮ್ಯ ಮನೋಹರ ಮಂಟಪ ಪ್ರಮುಖ ಸ್ಮಾರಕವಾಗಿದೆ ಎಂದು ಪ್ರತಿಪಾದಿಸಿದ ಅವರು, ಈ ಮಂಟಪದ ಸಂರಕ್ಷಣೆಗೆ ಆಸಕ್ತಿ ಹೊಂದಿರುವ ಫೌಂಡೇಷನ್‌ಗಳಿಗೆ ಒಪ್ಪಿಗೆ ಪತ್ರ ನೀಡಲಾಗಿರುತ್ತದೆ. ರಾಜ್ಯ ಸರ್ಕಾರದ ಯೋಜನೆಯಂತೆ ಬೆಂಗಳೂರಿನ ಖಾಸಗಿ ಸಂಸ್ಥೆ ಯುನೈಟೆಡ್ ವೇ ಫೌಂಡೇಷನ್‌ಗೆ ದತ್ತು ಒಪ್ಪಿಗೆ ಪತ್ರ ನೀಡಲಾಗುತ್ತಿದೆ ಎಂದು ಪ್ರಕಟಿಸಿದರು.

ಕೃಷ್ಣಕೃತ ಫೌಂಡೇಷನ್‌ಗೆ ಹಸ್ತಾಂತರ

ಕಲಬುರಗಿ ಜಿಲ್ಲೆಯ ಮಳಖೇಡ ವೀಕ್ಷಿಸಿದ ಸಚಿವರ ನೇತೃತ್ವದ ನಿಯೋಗ ರಾಜ್ಯದ ಸ್ಮಾರಕಗಳಲ್ಲಿ ಒಂದಾಗಿರುವ ಈ ಕೋಟೆಯ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಹೈದ್ರಾಬಾದ್ ಮೂಲದ ಕೃಷ್ಣಕೃತ ಫೌಂಡೇಷನ್‌ಗೆ ವಹಿಸಲಾಗಿದೆ ಎಂದು ತಿಳಿಸಿದರಲ್ಲದೆ, ಸ್ಥಳದಲ್ಲಿಯೇ ದತ್ತು ಒಪ್ಪಿಗೆ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಂ ಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು ಉಪಸ್ಥಿತರಿದ್ದರು.

ಸ್ಮಾರಕ ರಕ್ಷಣೆಗೆ ಸಾರ್ವಜನಿಕರಿಗೆ ಮನವಿ

ಯಾದಗಿರಿ ಜಿಲ್ಲೆಯ ಶಿರಿವಾಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನನ್ನಯ್ಯ ನಾದಯ್ಯ ಸಂಕಿರ್ಣಕ್ಕೆ ಭೇಟಿ ನೀಡಿ ಸ್ಮಾರಕಗಳನ್ನು ಪರಿಶೀಲಿಸಿದರಲ್ಲದೆ ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿ ಮತ್ತು ಪರಂಪರೆಗೆ ಪ್ರತೀಕವಾದ ಸ್ಮಾರಕಗಳನ್ನು ರಕ್ಷಿಸಲು ಸರ್ಕಾರದೊಂದಿಗೆ ಸಾರ್ವಜನಿಕರೊಂದಿಗೆ ಕೈಜೋಡಿಸಬೇಕೆಂದು ಸಚಿವ ಎಚ್.ಕೆ.ಪಾಟೀಲ ಮನವಿ ಮಾಡಿದರು.

ಇದೇ ವೇಳೆ ಇತ್ತೀಚಿನ ಮಳೆಗೆ ಕುಸಿದಿರುವ ಶಹಪುರದ ದಿಡ್ಡಿ ಬಾಗಿಲು ವೀಕ್ಷಿಸಿ ದುರಸ್ತಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕಾ ಸಚಿವರಾದ ಶರಣ ಬಸಪ್ಪ ದರ್ಶನಾಪೂರ್, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಉಪಸ್ಥಿತರಿದ್ದರು.

ಮೂರು ಜಿಲ್ಲೆ ಪ್ರವಾಸ ಮುಗಿಸಿದ ತಂಡ

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ನೇತೃತ್ವದ ತಂಡವು ಈ ಮೂರು ಜಿಲ್ಲೆಗಳ ಪ್ರವಾಸವನ್ನು ಪೂರೈಸಿದ್ದು, ಈ ವೇಳೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 3-ಡಿ ಲೇಸರ್ ಸ್ಕ್ಯಾನಿಂಗ್ ತಂತ್ರಜ್ಞಾನ ಮತ್ತು ‘ನಮ್ಮ ಸ್ಮಾರಕ ಡಿಜಿಟಲ್ ವೇದಿಕೆ’ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.

ಸ್ಮಾರಕಗಳ ದತ್ತು ಸ್ವೀಕಾರ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ಹಂತದಲ್ಲಿ 3 ಜಿಲ್ಲೆಗಳಲ್ಲಿ 7 ಸ್ಮಾರಕಗಳನ್ನು ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ದತ್ತು ನೀಡಲಾಗಿದೆ. ಈ ಮೂಲಕ ನಮ್ಮ ಸರ್ಕಾರವು ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಸ್ಮಾರಕಗಳ ಅಭಿವೃದ್ಧಿ ಮತ್ತು ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಇಲಾಖೆಗೆ ಹೊಸ ಆಯಾಮ ನೀಡಲು ಮುಂದಾಗಿದೆ.

-ಎಚ್.ಕೆ.ಪಾಟೀಲ, ಪ್ರವಾಸೋದ್ಯಮ ಸಚಿವರು.

ಮುಖ್ಯಾಂಶಗಳು:

*ಸ್ಮಾರಕ ದತ್ತು ಮೊದಲ ಪ್ರಯತ್ನಕ್ಕೆ ಭರ್ಜರಿ ಬೆಂಬಲ

*ಮೂರು ಜಿಲ್ಲೆಗಳ ಪ್ರವಾಸಕ್ಕೆ ತೆರೆ, ಹಲವು ಸ್ಮಾರಕಗಳ ದತ್ತು

*ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಸ್ಮಾರಕಗಳ ವೀಕ್ಷಣೆ, ಪರಿಶೀಲನೆ

*ವಿವಿಧ ಸೇವಾ ಸಂಸ್ಥೆಗಳಿಗೆ ದತ್ತು ಪತ್ರ ಹಸ್ತಾಂತರ

*ಶೀಘ್ರ ಎಲ್ಲ ಜಿಲ್ಲೆಗಳ ಪ್ರವಾಸ, ಸ್ಮಾರಕ ದತ್ತು ತ್ವರಿತ ವಿಸ್ತರಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net