ಬಿಜೆಪಿ ಭಿನ್ನಮತಕ್ಕೆ ಸದಸ್ಯತ್ವ ನೋಂದಣಿಯೂ ಅಸ್ತ್ರ

issues in bjp
Published on

ಬಹಿರಂಗ ವಾಗ್ದಾಳಿ ನಿಲ್ಲಿಸಿದ್ದಷ್ಟೇ ಸಮನ್ವಯ ಸಾಧನೆ ಸಂಪೂರ್ಣ ಶಮನವಾಗದ ರಾಜ್ಯ ನಾಯಕತ್ವದ ಮೇಲಿನ ಮುನಿಸು

ಬೆಂಗಳೂರು: ಬಿಜೆಪಿ (BJP) ಸಂಘಟನಾ ಕಾರ್ಯ ಯೋಜನೆಯಲ್ಲಿ ಪಕ್ಷದ ಸದಸ್ಯತ್ವ ನೋಂದಣಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪಕ್ಷದ ಅಂತಃಕಲಹ ಹಾಗೂ ಬಣದ ಬಲ ಪ್ರದರ್ಶನಕ್ಕೆ ಸದಸ್ಯತ್ವ ನೋಂದಣಿ ಅಭಿಯಾನ ಅಸ್ತ್ರವಾಗಿರುವುದು ಗಮನಾರ್ಹ. ಪಕ್ಷದ ಸಂಘಟನೆ ಬಲವರ್ಧನೆ, ಕಾರ್ಯಕರ್ತರಲ್ಲಿ ಹುರುಪು, ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟಕ್ಕಿಂತ ನಾಯಕತ್ವದ ವಿರುದ್ಧ ಪದೇಪದೆ ನೇರ, ಪರೋಕ್ಷವಾಗಿ ಸಿಡಿಯುವುದು ಭಿನ್ನ ಬಣದ ‘ಒಂದಂಶದ ಅಜೆಂಡಾ’ವೆಂದು ಆ ಮೂಲಕ ಬಿಂಬಿತವಾಗುತ್ತಿದೆ.

ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೆ ಸದಸ್ಯತ್ವ ಅಭಿಯಾನ ಮೊದಲ ಘಟ್ಟದ ವರದಿ ರವಾನೆಯಾಗಿದೆ. ಯಾರೆಲ್ಲ ಎಷ್ಟರಮಟ್ಟಿಗೆ ಪ್ರಯತ್ನಿಸಿದ್ದಾರೆ, ಮುತುವರ್ಜಿ ತೋರಿದ್ದಾರೆ ಎನ್ನುವುದು ಸದಸ್ಯತ್ವದ ಅಂಕಿ-ಅಂಶಗಳ ಮುಖೇನ ಮನವರಿಕೆ ಮಾಡಿಕೊಡಲಾಗಿದೆ. ಪೂರಕವಾಗಿ ವಿಧಾನಸಭೆ ಕ್ಷೇತ್ರವಾರು ಸದಸ್ಯತ್ವ ನೋಂದಣಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು, ಪ್ರತ್ಯೇಕ ಸಭೆ ಹಾಗೂ ಗುಂಪು ಚರ್ಚೆ ನಡೆಸುತ್ತಿರುವವರ ಆಸಕ್ತಿ ಏನೆಂದು ದೆಹಲಿ ನಾಯಕರಿಗೆ ಪರೋಕ್ಷವಾಗಿ ತಿಳಿಸುವ ಪ್ರಯತ್ನವೆಂದು ಪಕ್ಷದೊಳಗೆ ಚರ್ಚೆಯಾಗುತ್ತಿದೆ.

ಬದಲಾದ ರಾಗ

ಪಕ್ಷದ ರಾಜ್ಯ ಸಮಿತಿ ಶುದ್ಧೀಕರಣದ ಭಾಗವಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಯ ಬೇಡಿಕೆ ಇತ್ತೀಚಿನವರೆಗೆ ಮುನ್ನೆಲೆಯಲ್ಲಿತ್ತು. ಇದೀಗ ಅಧ್ಯಕ್ಷರ ಬದಲಾವಣೆಯಲ್ಲ, ಸಂಘಟನಾತ್ಮಕ ಬದಲಾವಣೆ ಬಗ್ಗೆ ವರಿಷ್ಠರಿಗೆ ಮಾಹಿತಿ ರವಾನಿಸಿದ್ದೇವೆ ಎನ್ನುವುದು ಅತೃಪ್ತರ ಹೊಸ ರಾಗ. ಸಮನ್ವಯ ಬೈಠಕ್​ನಲ್ಲಿ ಮಾತುಕತೆಯ ಆಂಶಿಕ ವಿವರಗಳು ಹೊರಬಂದಿವೆ. ಯಾರಿಗೆ ಯಾವ ಭರವಸೆ ನೀಡಲಾಗಿದೆಯೋ ಗೊತ್ತಾಗಿಲ್ಲ. ಆದರೆ ಬೇಡಿಕೆ ಪುರಸ್ಕರಿಸಲು ವರಿಷ್ಠರಿಗೆ ಭಿನ್ನ ಬಣ ಡಿಸೆಂಬರ್ ಗಡುವು ನೀಡಿರುವುದು ಹೊಸ ಬೆಳವಣಿಗೆಯಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಬಹಿರಂಗ ಹೇಳಿಕೆ, ಟೀಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಎಚ್ಚರಿಕೆ ಪರಿಣಾಮ ಬೀರಿದೆ. ಆ ಮಟ್ಟಿಗೆ ಆರೆಸ್ಸೆಸ್-ಬಿಜೆಪಿ ಸಮನ್ವಯ ಸಭೆ ಸಫಲತೆ ಸಾಧಿಸಿದ್ದರೂ ಅತೃಪ್ತಿ ಪೂರ್ಣ ಶಮನ ಮಾಡಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಗುರಿ ತಲುಪುವ ಸವಾಲು

ಗಣೇಶ ಚತುರ್ಥಿ ಹಬ್ಬದ ಕೆಲವು ದಿನಗಳ ಮುಂಚೆ ಈ ಬಾರಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಚಾಲನೆ ಪಡೆದಿದೆ. ಅಭಿಯಾನದ ಮೊದಲ ಹಂತ ಸೆ.25ಕ್ಕೆ ಮುಗಿದಿದ್ದರೂ ಈವರೆಗೆ 24 ಲಕ್ಷ ಸದಸ್ಯತ್ವ ನೋಂದಣಿ ಸಾಧ್ಯವಾಗಿದೆ. ಈ ಬಾರಿ ಒಂದೂವರೆ ಕೋಟಿ ಸದಸ್ಯತ್ವ ನೋಂದಣಿ ಗುರಿಯಿದೆ. ಆದರೆ ಕಳೆದ ಬಾರಿ ಮಿಸ್ಡ್ ಕಾಲ್ ಕೊಟ್ಟರೆ ಸದಸ್ಯತ್ವ ನೋಂದಣಿಯಾಗುತ್ತಿತ್ತು. ಈ ಸಲ ಸ್ವಲ್ಪ ವಿಭಿನ್ನವಾಗಿದ್ದು, ನಾಯಕರ ಕರ್ತೃತ್ವ ಶಕ್ತಿಗೆ ಸವಾಲಾಗಿದೆ ಎಂದು ಹೇಳಲಾಗುತ್ತಿದೆ. ನೋಂದಣಿಗೆ ನೀಡಿದ ಮೊಬೈಲ್​ಗೆ ಮಿಸ್ಡ್ ಕಾಲ್ ಕೊಟ್ಟವರ ಮೊಬೈಲ್​ಗೆ ಲಿಂಕ್ ಜತೆಗೆ ಒಟಿಪಿ ಬರಲಿದೆ. ಒಟಿಪಿ ನಮೂದಿಸಿದ ಬಳಿಕ ಸದಸ್ಯತ್ವದ ಅರ್ಜಿ ನಮೂನೆ ತೆರೆದುಕೊಳ್ಳಲಿದೆ. ಆಧಾರ್ ಸಂಖ್ಯೆ, ಫೋಟೊಸಹಿತ ವಿವರ ಭರ್ತಿ ಮಾಡಿ ಅಪ್​ಲೋಡ್ ಮಾಡಬೇಕಾಗುತ್ತದೆ. ಬಹಳಷ್ಟು ಜನ ಮೊಬೈಲ್​ಗೆ ಬಂದ ಒಟಿಪಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ವಿಷಯ ತಿಳಿಸಿ ಮನವೊಲಿಸುವುದಕ್ಕೆ ಕಾಲಾವಕಾಶ ಹಿಡಿಯುತ್ತದೆ. ನೋಂದಣಿ ಪ್ರಕ್ರಿಯೆ ನಿಧಾನವಾಗಿದ್ದರೂ ಎರಡನೇ ಹಂತದಲ್ಲಿ ಅ.1ರಿಂದ 15ರವರೆಗೆ ಕಾಲಾವಕಾಶವಿದೆ. ಗುರಿ ದಾಟುತ್ತೇವೆ ಎಂಬ ವಿಶ್ವಾಸವನ್ನು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಪ್ರತ್ಯುತ್ತರದ ಪ್ರಯತ್ನ

ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ನಾಗ ಮಂಗಲ ಗಲಭೆಯ ವಸ್ತುಸ್ಥಿತಿ ಅಧ್ಯಯನ ಮಾಡಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದೆ. ಇದೀಗ ಬಸನಗೌಡ ಪಾಟೀಲ ಯತ್ನಾಳ್, ಪ್ರತಾಪಸಿಂಹ ಮತ್ತಿತರರ ತಂಡ ದಾವಣ ಗೆರೆಗೆ ಭೇಟಿ ನೀಡಿ, ಗಣೇಶ ವಿಗ್ರಹ ವಿಸರ್ಜನೆ ಗಲಾಟೆಯಲ್ಲಿ ನೊಂದವರು ಮತ್ತು ಹಿಂದು, ಸಂಘ-ಪರಿವಾರದ ಕಾರ್ಯಕರ್ತರ ಅಹ ವಾಲು ಆಲಿಸಿದೆ. ವಿಜಯೇಂದ್ರ ಕ್ರಮಕ್ಕೆ ಪ್ರತ್ಯುತ್ತರವಾಗಿ ಈ ತಂಡ ವಸ್ತುಸ್ಥಿತಿ ಪರಿಶೀಲಿ ಸಿದೆ ಎಂದು ರ್ತಸಲಾಗುತ್ತಿದೆ. ಈ ತರಹದ ಸ್ಥಳ ಭೇಟಿ, ಕಾರ್ಯಕರ್ತರ ಜತೆಗೆ ಒಡನಾಟದಿಂದ ಸಂಘಟ ನೆಗೆ ಪ್ರಯೋಜನವಾಗಲಿದೆ ಎಂದು ಮೂಲಗಳು ಹೇಳುತ್ತವೆ.

ಖರ್ಗೆ ವಿರುದ್ಧವೇ ಕೈ ಷಡ್ಯಂತ್ರ

ದಾವಣಗೆರೆ: ಮುಡಾ ಹಗರಣ ಹೊರತಂದವರು ನಾವಲ್ಲ, ಕಾಂಗ್ರೆಸ್ ಪಕ್ಷದವರೇ. ಮಲ್ಲಿಕಾರ್ಜುನ ಖರ್ಗೆ ಮುಂದಿನ ಸಿಎಂ ಆಗುವ ಸಂಭವವಿದೆ ಎಂಬ ಸುದ್ದಿ ಬಂದಾಗ ಖರ್ಗೆ ಅವರ 5 ಎಕರೆ ಜಮೀನು ವಿವಾದ ಮುಂದಿಟ್ಟವರೂ ಅವರೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಕಾಂಗ್ರೆಸ್ ಒಡೆದು ಮುಖ್ಯಮಂತ್ರಿ ಆಗಲು ಎಷ್ಟೋ ಮಂದಿ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದರು. ಸಾವಿರ ಕೋಟಿ ರೂ. ಇರಿಸಿಕೊಂಡವರು ಯಾರೆಂಬುದನ್ನು ನೀವೇ ಊಹಿಸಿ. ಈ ಹಿಂದೆ ಅವರ ಮನೆಯಲ್ಲಿ ನೋಟು ಎಣಿಕೆ ಯಂತ್ರ ಪತ್ತೆಯಾಗಿತ್ತು. ಸಾವಿರ ಕೋಟಿ ರೂ. ಇರಿಸಿಕೊಂಡವರು ಕಾಂಗ್ರೆಸ್- ಬಿಜೆಪಿ ಎರಡರಲ್ಲೂ ಇದ್ದಾರೆ. ಕೆಲವರ ಬಳಿ ಭ್ರಷ್ಟಾಚಾರದ ಹಣವೂ ಇರಬಹುದು. ಹಾಗಾಗಿ ಸರ್ಕಾರ ಉರುಳಿಸಲು ಅವರು ಮುಂದಾಗಿದ್ದಾರೆ ಎಂದು ಹೇಳಿದರು.

ನಾವು ಭಿನ್ನಮತೀಯರಲ್ಲ: ಪಕ್ಷ ಉಳಿಸಲು ಪ್ರಯತ್ನ ಮಾಡುತ್ತಿರುವ ನಾವು ನಿಷ್ಠಾವಂತ ಕಾರ್ಯಕರ್ತರೇ ಹೊರತು ಭಿನ್ನಮತೀಯರಲ್ಲ. ವಿಜಯೇಂದ್ರ ವಿರುದ್ಧ ಹೇಳಿಕೆ ನೀಡುವುದಿಲ್ಲ. ಡಿಸೆಂಬರ್ ನಂತರ ಪಕ್ಷದ ತೀರ್ಮಾನ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net