ಹೊಸಗಾವಿ ಗ್ರಾಪಂ ಪಿಡಿಒ ವಿರುದ್ಧ ಸದಸ್ಯ ಪ್ರತಿಭಟನೆ

03M.D.R.3
ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮ ಪಂಚಾಯಿತಿಯ ಪಿಡಿಒ ಸಾರ್ವಜನಿಕರ ಕೆಲಸಗಳನ್ನು ಸಮರ್ಪಕವಾಗಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಅರೋಪಿಸಿ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿಗೌಡ (ಬಿ.ಎಸ್. ಗೌಡ) ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
Published on

ಮದ್ದೂರು: ತಾಲೂಕಿನ ಹೊಸಗಾವಿ ಗ್ರಾಮ ಪಂಚಾಯಿತಿಯ ಪಿಡಿಒ ಸಾರ್ವಜನಿಕರ ಕೆಲಸಗಳನ್ನು ಸಮರ್ಪಕವಾಗಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿಗೌಡ (ಬಿ.ಎಸ್.ಗೌಡ) ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸಭೆ ಕರೆಯಲಾಗಿತ್ತು, ಸಭೆಗೆ ಹೋಗದೆ ಬೆಟ್ಟಸ್ವಾಮಿಗೌಡ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಹಠಾವೋ ಹೊಸಗಾವಿ ಪಂಚಾಯಿತಿ ಬಚಾವೋ, ತಾಪಂ ಇಒ ಹಠಾವೋ ಮದ್ದೂರು ತಾಲೂಕು ಬಚಾವೋ ಎಂಬ ಬಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸುವ ಮೂಲಕ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು ಹಾಗೂ ಸಭೆಗೆ ಹೋಗದೆ ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದರು.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಪ್ರತಿಭಟಿಸುತ್ತಿದ್ದ ಬೆಟ್ಟಸ್ವಾಮಿಗೌಡ ಅವರನ್ನು ಮನವೊಲಿಸಿ ಸಭೆಗೆ ಕರೆದುಕೊಂಡು ಹೋದರು. ಈ ವೇಳೆ ಬೆಟ್ಟಸ್ವಾಮಿಗೌಡ ಹಾಗೂ ಕೆಲ ಗ್ರಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಪಿಡಿಒ ಅವರು ಸರಿಯಾಗಿ ಪಂಚಾಯಿತಿಗೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ವರ್ಷ ಕಳೆದರೂ ಸಾರ್ವಜನಿಕರ ಇ ಸ್ವತ್ತುಗಳನ್ನು ಮಾಡುತ್ತಿಲ್ಲ. ಚಿಕ್ಕ ಹೊಸಗಾವಿ ಗ್ರಾಮಕ್ಕೆ ಕಳೆದೊಂದು ವರ್ಷದಿಂದ ನರೇಗಾ ಯೋಜನೆಯಲ್ಲಿ ಯಾವುದೇ ಕಾಮಗಾರಿಯನ್ನು ನೀಡಿಲ್ಲ. ನಮ್ಮೂರಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭರವಸೆ: ಹೊಸಗಾವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ವಿಸ್ತೃತವಾದ ವರದಿಯನ್ನು ತರಿಸಿಕೊಂಡು ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಲ್. ಸಂದೀಪ್ ಅವರು ದೂರವಾಣಿ ಮೂಲಕ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net