ಪ್ರತ್ಯೇಕ ರಾಷ್ಟ್ರದ ಕಿಡಿ ಹಚ್ಚಿಸಿದ ಸಂಸದ ಡಿಕೆ ಸುರೇಶ್​ಗೆ ಸಂಕಷ್ಟ!

DK Suresh
Published on

ಬೆಂಗಳೂರು: ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡುವ ಮೂಲಕ ಸಂಸದ ಡಿಕೆ ಸುರೇಶ್ ಹೊಸತೊಂದು ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆ ಕೋರ್ಟ್​ ಅಂಗಳ ತಲುಪಿದೆ. ಬಂಟ್ವಾಳ ಮೂಲದ ವಿಕಾಸ್ ಪಿ ಎಂಬ ವ್ಯಕ್ತಿ ಡಿಕೆ ಸುರೇಶ್​ ವಿರುದ್ಧ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಡಿಕೆ ಸುರೇಶ್ ನೀಡಿರುವ ಈ ಹೇಳಿಕೆ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ.

ಡಿ.ಕೆ ಸುರೇಶ್ ಅವರ ಹೇಳಿಕೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆಯಾಗಿದೆ. ಐಪಿಸಿ ಸೆಕ್ಷನ್ 124(ಎ) ಪ್ರಕಾರ ಡಿಕೆಸು ಹೇಳಿಕೆ ಶಿಕ್ಷಾರ್ಹ ಅಪರಾಧ ಆಗಲಿದೆ. ದೇಶದ ನಾಗರಿಕರಿಗೆ ಡಿಕೆ ಸುರೇಶ್​ ಹೇಳಿಕೆ ಮಾನಸಿಕ ಆಘಾತ ತಂದಿದೆ. ಹೀಗಾಗಿ ನ್ಯಾಯಾಲಯವು ಈ ಹೇಳಿಕೆ ಕುರಿತ ಮುಂದಿನ ತನಿಖೆಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ನಿರ್ದೇಶಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಇನ್ನೊಂದು ಕಡೆ ಸಂಸದ ಸುರೇಶ್​ ಹೇಳಿಕೆ ವಿರುದ್ಧ ಲೋಕಸಭೆ ಸ್ಪೀಕರ್ ಅವರಿಗೂ ದೂರು ಸಲ್ಲಿಸಲಾಗಿದೆ. ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಅವರು ಲೋಕಸಭೆ ಸ್ಪೀಕರ್‌ಗೆ ಎರಡು ಪುಟಗಳ‌ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.

ಸಂವಿಧಾನದ ಪ್ರಮಾಣ ವಚನ ಸ್ವೀಕಾರ ಮಾಡಿರುವ ಡಿಕೆಸು ತಮ್ಮ ಹೇಳಿಕೆ ಮೂಲಕ ಉಲ್ಲಂಘಿಸಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಡಿಕೆಸು ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ.‌ ಸಂಸದ ಡಿಕೆ ಸುರೇಶ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭೆ ಸ್ಪೀಕರ್‌ಗೆ ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ.

ಕೇಂದ್ರ ಬಜೆಟ್‌ ದಿನದಂದೇ ಡಿಕೆ ಸುರೇಶ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ. ಅಖಂಡ ಭಾರತದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net