

ಬೆಂಗಳೂರು:
ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ತಂಡ ಮುಂದಾಗಿದೆ.
ಕಳೆದ ಬಾರಿ 1 ಕೋಟಿ ಸದಸ್ಯತ್ವನ್ನು ಮಾಡಲಾಗಿತ್ತು. ಈ ಬಾರಿ ಕನಿಷ್ಠ 1.50 ಕೋಟಿ ಸದಸ್ಯರನ್ನು ಪಕ್ಷಕ್ಕೆ ನೋಂದಣಿ ಮಾಡಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಸರಣಿ ಸಭೆಗಳು ನಡೆದಿವೆ.
ಮೊದಲ ಹಂತದ ಸದಸ್ಯತ್ವ ಅಭಿಯಾನದಲ್ಲಿ 40 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಈಗ
ಎರಡನೇ ಹಂತದ ಅಭಿಯಾನ ಬಿರುಸಿನಿಂದ ನಡೆಯುತ್ತಿದೆ. ಇನ್ನು ಹದಿನೈದು ದಿನದಲ್ಲಿ ಸದಸ್ಯತ್ವ ನೋಂದಣಿ 1 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲು ಕ್ರಮ ಕೈಗೊಂಡಿರುವ ಪಕ್ಷದ ಅಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ 9 ವಿಭಾಗಗಳಲ್ಲಿ ಪರಿಶೀಲನಾ ಸಭೆ ನಡೆಸಲು ಯೋಜಿಸಲಾಗಿದೆ.
ಅ.5, 6ರಂದು ರಾಜ್ಯದ ಎಲ್ಲ ಬೂತ್‌ಗಳಲ್ಲಿ ಏಕಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ಅಭಿಯಾನ ನಡೆಸಲು ಯೋಜನೆ ರೂಪಿಸಲಾಗಿದೆ. ಸದಸ್ಯತ್ವ ನೋಂದಣಿ ನೇತೃತ್ವ ವಹಿಸಿರುವ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಬೂತ್ ಮಟ್ಟದಲ್ಲಿ ಕಳೆದ ಬಾರಿ ಆಗಿದ್ದ ಸದಸ್ಯತ್ವ ನೋಂದಣಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೋಂದಣೆ ಆಗಬೇಕು ಎನ್ನುವ ಗುರಿ ನೀಡಲಾಗಿದೆ. ಪಕ್ಷದ ಸಂಘಟನೆ ಆದ್ಯತೆ ದೃಷ್ಟಿಯಿಂದ ಯಾವ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸದಸ್ಯತ್ವ ನೋಂದಣಿ ಕಡಿಮೆ ಇದೆ ಎನ್ನುವುದನ್ನು ಗುರುತು ಮಾಡಿ, ಮುಖಂಡರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಸಮಸ್ಯೆಗಳು ಇದ್ದಲ್ಲಿ ಕೇಂದ್ರ ಕಚೇರಿಗೆ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ತಾವು ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ವರಿಷ್ಠರು ನಿರೀಕ್ಷೆ ಮಾಡುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಬೇಕು ಎನ್ನುವುದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ನಿರೀಕ್ಷೆಯಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ತಂಡ ಕೆಲಸ ಮಾಡುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
*ಕಳೆದ ಬಾರಿ 1 ಕೋಟಿ ಸದಸ್ಯರನ್ನು ನೋಂದಾಯಿಸಲಾಗಿತ್ತು. ಈ ಬಾರಿ 1.50 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಇಟ್ಟುಕೊಂಡು ರಾಜದ್ಯದ ಎಲ್ಲೆಡೆ ಅಭಿಯಾನ ಮಾಡಲಾಗುತ್ತಿದೆ.
-ಎನ್.ರವಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ.