

Bird Flu: ಪಕ್ಕದ ಆಂಧ್ರಪ್ರದೇಶದಲ್ಲಿ ಕಳೆದ ಒಂದೆರೆಡು ವಾರಗಳ ಹಿಂದೆ ಕಾಣಿಸಿಕೊಂಡ ಹಕ್ಕಿ ಜ್ವರದಿಂದ ರಾಜ್ಯದ ಜನರಲ್ಲಿ ಭಯದ ಭೀತಿ ಎದುರಾಗಿದೆ. ಹಕ್ಕಿ ಜ್ವರ ವ್ಯಾಪಿಸಿದ ಬೆನ್ನಲ್ಲೇ ಕೋಳಿ ಮಾಂಸ ಖರೀದಿ ಕೈಬಿಟ್ಟ ಜನತೆ, ಎಲ್ಲಿಯೂ ಕೋಳಿ ಮಾಂಸದೂಟವನ್ನು ಮಾಡುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡ ಆಂಧ್ರ ಕೋಳಿ ಸಾಕಾಣಿಕೆ ಸಂಘವು, ಇದೀಗ ಹೊಸ ಹಾಗೂ ವಿಭಿನ್ನ ಪ್ರಯತ್ನದಲ್ಲಿ ತೊಡಗಿದೆ.
ಹಕ್ಕಿ ಜ್ವರ ಸುದ್ದಿಗಳು ಆಂಧ್ರ ಜನರಲ್ಲಿ ಭಯದ ಭೀತಿಯನ್ನು ಮೂಡಿಸಿದ ಹಿನ್ನೆಲೆ ಆಂಧ್ರಪ್ರದೇಶ ಕೋಳಿ ಸಾಕಾಣಿಕೆ ಸಂಘವು, ನಿನ್ನೆ (ಫೆ. 24) ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಕಲಾ ಕಾಲೇಜು ಆವರಣದಲ್ಲಿ ಕೋಳಿ ಮತ್ತು ಮೊಟ್ಟೆ ಮೇಳವನ್ನು ಆಯೋಜಿಸಿತ್ತು. ಕೋಳಿ ಉತ್ಪನ್ನಗಳ ಸೇವನೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಭರವಸೆ ನೀಡುವುದರ ಜತೆಗೆ ಸ್ಥಳೀಯ ಕೋಳಿ ಉದ್ಯಮವನ್ನು ಬೆಂಬಲಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿತ್ತು.
ಇದರೊಟ್ಟಿಗೆ ಮೇಳಕ್ಕೆ ಆಗಮಿಸಿದ ಜನರಿಗೆ ರುಚಿಕರವಾದ, ವಿಧ ವಿಧವಾದ ಮಾಂಸದಡಿಗೆ ಮಾಡಿ, ಉಣಬಡಿಸಲಾಯಿತು. ಮೇಳದಲ್ಲಿ ಯಾರೆಲ್ಲಾ ಹಾಜರಿದ್ದರೋ, ಅವರಿಗೆಲ್ಲಾ ಚಿಕನ್ ಬಿರಿಯಾನಿ ಮತ್ತು ಬೇಯಿಸಿದ ಮೊಟ್ಟೆಗಳನ್ನು ಉಚಿತವಾಗಿ ನೀಡಲಾಯಿತು.
ಇನ್ನು ಇಂದೂ ಕೂಡ ಇದೇ ರೀತಿಯ ಮೇಳವನ್ನು ಸಂಜೆ 5 ಗಂಟೆಗೆ ಎನ್ಟಿಆರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಚಿಕನ್ ಬಿರಿಯಾನಿ ಸೇರಿದಂತೆ ಮೊಟ್ಟೆಯಿಂದ ಮಾಡಿದ ಬಗೆಬಗೆಯ ತಿನಿಸುಗಳನ್ನು ಉಚಿತವಾಗಿ ನೀಡುವ ಮೂಲಕ ಜನರಲ್ಲಿರುವ ಹಕ್ಕಿ ಜ್ವರದ ಭೀತಿಯನ್ನು ಹೋಗಲಾಡಿಸುವುದು ಈ ಮೇಳದ ಉದ್ದೇಶವಾಗಿದೆ,(ಏಜೆನ್ಸೀಸ್).