

ರಾಮನಗರ : ಮೇಕೆದಾಟು ಅಣೆಕಟ್ಟೆ ನಿರ್ಮಾಣ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದರೆ ರೈತರೇ ಜಲಾಶಯಕ್ಕೆ ಅಡಿಗಲ್ಲು ಹಾಕುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ರೈತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು. ಯೋಜನೆ ಬಗ್ಗೆ ಅವರ ಇಚ್ಛಾಶಕ್ತಿ ಗೊತ್ತಾಗಬೇಕು. ಜಲಾಶಯ ನಿರ್ಮಾಣಕ್ಕೆ ಬದ್ಧರಾಗಿದ್ದಲ್ಲಿ, ಕಾಲಮಿತಿ ನಿಗದಿಗೊಳಿಸಿ ಯೋಜನೆ ಪೂರ್ಣಗೊಳಿಸಲಾಗುವುದು ಎಂಬುದನ್ನು ತಿಳಿಸಲಿ. ವಿಳಂಬ ಮಾಡಿದರೆ ರಾಜ್ಯದ ಎಲ್ಲೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಆಗಮಿಸಿ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ ಹಾಗೂ ಈ ಬಗ್ಗೆ ಸದ್ಯದಲ್ಲೇ ಸಂಘ ಕಾರ್ಯಕಾರಿಣಿಯಲ್ಲಿ ಚರ್ಚಿಸಿ ದಿನಾಂಕ ನಿರ್ಧರಿಸುವುದಾಗಿ ತಿಳಿಸಿದರು.
ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಅನಸೂಯಮ್ಮ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಚ್.ಬಿ. ಚಂದ್ರಶೇಖರ್, ಪ್ರಮುಖರಾದ ಬೈರೇಗೌಡ, ರಮೇಶ್, ಅನಂತರಾಮ ಪ್ರಸಾದ್, ಗೋವಿಂದರಾಜು, ಸೀಬಕಟ್ಟೆ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.
ಕಾವೇರಿ ನ್ಯಾಯಮಂಡಳಿ, ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ಸಿಗಬೇಕಾದ ಪ್ರಮಾಣದಷ್ಟು ನೀರು ಸಿಗಲಿದೆ. ನೀರು ಸಿಗದಿದ್ದ ಪಕ್ಷದಲ್ಲಿ ಮಾತ್ರ ಆ ರಾಜ್ಯ ಕಾವೇರಿ ನಿರ್ವಹಣಾ ಮಂಡಳಿಯ ಮೊರೆ ಹೋಗಬಹುದು. ಇದಿಷ್ಟೇ ಆ ರಾಜ್ಯದ ಹಕ್ಕು, ಜಲಾಶಯ ನಿರ್ಮಾಣದ ವಿಚಾರದಲ್ಲಿ ಆಕ್ಷೇಪಣೆ ವ್ಯಕ್ತಪಡಿಸುವ ಹಕ್ಕು ತಮಿಳುನಾಡಿಗಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಕಾವೇರಿ ನದಿ ನೀರು, ಮೇಕೆದಾಟು ಯೋಜನೆಯನ್ನು ತಮಿಳುನಾಡು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ.
ಆ ರಾಜ್ಯದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ವಿರುದ್ಧ ಸತ್ಯಾಗ್ರಹ ನಡೆಸಿರುವುದೂ ಸಹ ರಾಜಕೀಯ ಕಾರಣಕ್ಕೆ. ಹೀಗಾಗಿ ಪ್ರತಿಯಾಗಿ ಪ್ರತಿಭಟಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ತಮಿಳುನಾಡಿನ ಕ್ಯಾತೆಗಳಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದರು. ಅಣ್ಣಾಮಲೈ ಪ್ರತಿಭಟನೆಯ ವಿಚಾರದಲ್ಲಿ ತಾನು ಭಾರತೀಯ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಬಿಜೆಪಿ ನಾಯಕರ ಶಿಷ್ಯ ಅಣ್ಣಾಮಲೈ. ಸಿ.ಟಿ.ರವಿ ಅವರ ಹೇಳಿಕೆ ಮೂರ್ಖತನದ್ದು. ಮೊದಲು ನಮ್ಮ ತಾಯಿಯನ್ನು ಅಮ್ಮ ಅನ್ನುತ್ತೇವೆ, ತದನಂತರವಷ್ಟೇ ಬೇರೆಯವರಿಗೆ ಗೌರವ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಎಚ್.ಬಿ. ಚಂದ್ರಶೇಖರ್ ಅವರನ್ನು ನೇಮಕ ಮಾಡಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದರು.
ಇತರ ಪದಾಧಿಕಾರಿಗಳಾಗಿ ಶ್ರೀನಿವಾಸ್-ಜಿಲ್ಲಾ ಕಾರ್ಯದರ್ಶಿ, ಕೆ.ಎಲ್.ಸುನಿಲ್ ಕುಮಾರ್ - ಮಾಧ್ಯಮ ವಕ್ತಾರ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ, ರಾಜೇಗೌಡ- ಸಂಘಟನಾ ಕಾರ್ಯದರ್ಶಿ, ಮೃತ್ಯುಂಜಯ - ಕಾನೂನು ಸಲಹೆಗಾರ, ನಾಗಮ್ಮ-ಮಹಿಳಾ ಘಟಕದ ಅಧ್ಯಕ್ಷೆ, ಶೇಖ್ ಅಹಮದ್, ಸುರೇಂದ್ರ-ಸಹ ಕಾರ್ಯದರ್ಶಿಗಳು, ಗಂಗಣ್ಣ ಅತ್ತಿಂಗೆರೆ, ತಿಮ್ಮಣ್ಣ, ಗಿರೀಶ್, ರಾಮಣ್ಣ