ಭವಿಷ್ಯದಲ್ಲಿ ಬೆಂಗಳೂರಿಗೆ ನೀರುಣಿಸುವ ಯೋಜನೆಗೆ 9 ಸಾವಿರ ಕೋಟಿ ರೂ..! ತ್ವರಿತ ಜಾರಿಗೆ ಕ್ರಮ

Mekedatu
Published on

ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲನ/ ಶೇಖರಣಾ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಜತೆ ತ್ವರಿತವಾಗಿ ಮಾತುಕತೆ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮೇಕೆದಾಟು ಯೋಜನೆ ಜಾರಿ ಸಂಬಂಧ ಎದುರಾಗಿರುವ ಸಮಸ್ಯೆಗಳ ಕುರಿತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗಬಾರದು ಎನ್ನುವ ಪ್ರಮುಖ ಉದ್ದೇಶವೂ ಈ ಯೋಜನೆ ಹಿಂದೆ ಇದೆ. ಈ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗಕ್ಕೂ ಮನವರಿಕೆ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಈಗಾಗಲೇ ಎರಡು ಬಾರಿ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಕೇಂದ್ರ ಜಲ ಆಯೋಗವು ಸಮಗ್ರ ಯೋಜನಾ ವರದಿಯ ಪರಿಶೀಲನೆ ಮಾಡುತ್ತಿದೆ. ಅದನ್ನು ತ್ವರಿತವಾಗಿ ಮಾಡಿ ಮುಗಿಸುವಂತೆಯೂ ಆಯೋಗವನ್ನು ಕೋರಲಾಗುವುದು. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆ ಕೂಡ ಬೇಕಿದ್ದು ಎಲ್ಲವನ್ನೂ ತ್ವರಿತವಾಗಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಡುವುದಕ್ಕೂ ಇದು ಹೆಚ್ಚು ಅನುಕೂಲ. ಹಾಗೆಯೇ 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಒಟ್ಟಾರೆ ಈ ಯೋಜನೆಗೆ ಒಂಬತ್ತು ಸಾವಿರ ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರಾಜ್ಯಗಳಿಗೂ ಹೆಚ್ಚು ಅನುಕೂಲ ಆಗಲಿದೆ ಎಂದು ಅವರು ಹೇಳಿದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶ ಜಯಪ್ರಕಾಶ್‌ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net