ರವಿತೇಜ ಸಣ್ಣಪುಟ್ಟ ಹೀರೋ; ವಿವಾದಕ್ಕೀಡಾಯಿತು ಚಿರಂಜೀವಿ ಹೇಳಿಕೆ

Ravitheja
Published on

ಕಳೆದ ವರ್ಷ ‘ಆಚಾರ್ಯ’, ‘ಗಾಡ್​ಫಾದರ್’ ಚಿತ್ರಗಳು ಸೋತ ಬಳಿಕ ತೆಲುಗು ಸ್ಟಾರ್ ಚಿರಂಜೀವಿ ಇದೀಗ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದ ಚಿರಂಜೀವಿ, ರವಿತೇಜ ಅಭಿನಯದ ‘ವಾಲ್ಟೇರ್ ವೀರಯ್ಯ’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂ. ಗಳಿಕೆ ಮಾಡಿಕೊಂಡು ಗೆಲುವಿನ ನಾಗಾಲೋಟ ಮುಂದುವರಿಸಿದೆ.

ಹಾಗಾಗಿ, ಚಿತ್ರತಂಡ ಅದ್ದೂರಿ ಸಂಭ್ರಮಾಚರಣೆ ಆಯೋಜಿಸಿತ್ತು. ಈ ಸಂತೋಷಕೂಟ ದಲ್ಲಿ ಮಾತನಾಡುವ ಭರದಲ್ಲಿ ಚಿರಂಜೀವಿ, ‘ಸನ್ನಿವೇಶವೊಂದರ ಚಿತ್ರೀಕರಣದ ಸಮಯದಲ್ಲಿ ರವಿತೇಜ ನಟನೆ ನೋಡಿ, ದೊಡ್ಡ ಹೀರೋ ಆಗಿದ್ದರೂ ನಾನು ರವಿತೇಜಾರಂತಹ ಸಣ್ಣ ಹೀರೋ ಬಳಿ ಹೋಗಿ ಮುತ್ತು ಕೊಟ್ಟಿದ್ದೆ. ಮರುದಿನ ಸಾವಿನ ಸನ್ನಿವೇಶವೊಂದರ ಚಿತ್ರೀಕರಣವಿತ್ತು. ಆಗಲೂ ರವಿತೇಜಗೆ ಮುತ್ತು ಕೊಟ್ಟಿದ್ದೆ. ರವಿತೇಜ ನನ್ನ ಸ್ವಂತ ತಮ್ಮನಂತೆ ...’ ಎಂದು ವೇದಿಕೆಯಲ್ಲಿ ಹೇಳಿಕೊಂಡಿದ್ದರು.

ಅವರ ಈ ಹೇಳಿಕೆ ಸದ್ಯ ರವಿತೇಜಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. 33 ವರ್ಷಗಳಲ್ಲಿ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ನಟನಿಗೆ ಸಣ್ಣಪುಟ್ಟ ನಟ ಎಂದಿರುವುದು ತಪು್ಪ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ‘ವೀರ ಸಿಂಹ ರೆಡ್ಡಿ’ ಚಿತ್ರದ ಸಂತೋಷಕೂಟದಲ್ಲಿ ನಂದಮೂರಿ ಬಾಲಕೃಷ್ಣ ಕೂಡ ಎನ್​ಟಿಆರ್ ಅವರ ಸಮಕಾಲೀನ ನಟರಾದ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ರಂಗ ರಾವ್ ಅವರ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದರು. ಅದರ ಬೆನ್ನಲ್ಲೇ ಇದೀಗ ಚಿರಂಜೀವಿ ಹೇಳಿಕೆ ವಿವಾದಕ್ಕೀಡಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net