ಹೊರ ರಾಜ್ಯಕ್ಕೂ ನಂದಿನಿ ಉತ್ಪನ್ನ; ಮಾರುಕಟ್ಟೆ ವಿಸ್ತರಿಸಲು ಮೆಗಾ ಯೋಜನೆ..

KMF
Published on

| ಶಿವಾನಂದ ತಗಡೂರು ಬೆಂಗಳೂರು

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ಬ್ರಾ್ಯಂಡ್​ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಮೆಗಾ ಯೋಜನೆ ತಯಾರಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರತಿ ನಿತ್ಯ 1.50 ಲಕ್ಷ ಲೀಟರ್, ಆಂಧ್ರಕ್ಕೆ 1 ಲಕ್ಷ ಲೀಟರ್ ಹಾಲು ಕಳುಹಿಸಲಾಗುತ್ತಿದೆ. ಅಲ್ಲಿಯೇ ಘಟಕ ತೆರೆಯುವುದರಿಂದ ಇನ್ನಷ್ಟು ತ್ವರಿತಗತಿಯಲ್ಲಿ ಸೇವೆ ಒದಗಿಸಲು ಮತ್ತು ಮಾರುಕಟ್ಟೆ ವಿಸ್ತಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಒಕ್ಕೂಟದ ಅಂದಾಜು.

ಹೊಸ ಘಟಕದಲ್ಲಿ ಹಾಲಿನ ಶಿಥಿಲೀಕರಣ ಜತೆಗೆ ಹಾಲಿನ ಪ್ಯಾಕೆಟ್ ಮಾಡುವುದು, ಮೊಸರು, ಮಜ್ಜಿಗೆ, ಬೆಣ್ಣಿ ಸೇರಿ ಇನ್ನಿತರ ಉತ್ಪನ್ನಗಳ ತಯಾರಿಕೆಗೆ ನಿರ್ಧರಿ ಸಲಾಗಿದೆ. ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಈಗಾಗಲೆ ಇರುವ ಖಾಸಗಿ ಘಟಕಗಳನ್ನು ಖರೀದಿ ಮಾಡುವುದು ಒಂದು ಪ್ರಸ್ತಾವನೆಯಾದರೆ, ಹೊಸದಾಗಿಯೇ ಪ್ಲಾ್ಯಂಟ್ ಆರಂಭಿಸುವುದು ಮತ್ತೊಂದು ಯೋಜನೆ.

ಆಪ್ಘಾನಿಸ್ತಾನಕ್ಕೆ ರಫ್ತು: ನೆರೆ ದೇಶಗಳಿಗೂ ಹಾಲು ರಫ್ತು ಮಾಡುವ ನಿಟ್ಟಿನಲ್ಲಿಯೂ ಕೆಎಂಎಫ್ ಹಿಂದೆ ಬಿದ್ದಿಲ್ಲ. ಈ ಬಾರಿ ಆಪ್ಘಾನಿಸ್ತಾನಕ್ಕೆ 400 ಮೆಟ್ರಿಕ್ ಟನ್ ಹಾಲಿನ ಪೌಡರ್ ರಫ್ತು ಮಾಡುವ ಮೂಲಕ ಒಕ್ಕೂಟ ತನ್ನ ಹೆಗ್ಗಳಿಕೆ ಹೆಚ್ಚಿಸಿಕೊಂಡಿದೆ.

ಸೇನೆಗೆ 40 ಸಾವಿರ ಲೀ.: ವರ್ಷವಾದರೂ ಕೆಡದ ರೀತಿಯಲ್ಲಿರುವ ಯುಎಚ್​ಟಿ ಪ್ಯಾಕ್ ಮಿಲ್ಕ್ ಅನ್ನು ಕೆಎಂಎಫ್ ಉತ್ಪಾದನೆ ಮಾಡುತ್ತಿದ್ದು, ಪ್ರತಿನಿತ್ಯ ಭಾರತೀಯ ಸೇನೆಗೆ 40 ಸಾವಿರ ಲೀಟರ್ ಸರಬರಾಜು ಮಾಡುತ್ತಿದೆ. ಸದ್ಯದಲ್ಲಿಯೇ 50 ಸಾವಿರ ಲೀ.ಗೆ ಬೇಡಿಕೆ ಬರಬಹುದು ಎನ್ನುವ ನಿರೀಕ್ಷೆ ಇದೆ. ತಿರುಮಲ ಆಡಳಿತ ಮಂಡಳಿ ಮತ್ತೆ ಕೆಎಂಎಫ್ ಕಡೆಗೆ ಮುಖ ಮಾಡಿದ್ದು, ಪ್ರತಿ 3 ತಿಂಗಳಿಗೊಮ್ಮೆ 150 ಟನ್​ನಂತೆ ವರ್ಷಕ್ಕೆ 600 ಟನ್ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗುತ್ತಿದೆ. ಇದಲ್ಲದೆ, ನಿತ್ಯವೂ 10 ಸಾವಿರ ಲೀಟರ್ ಹಾಲನ್ನು ಐಸ್ಕ್ರೀಂ ಮಾಡಲು ಬಳಕೆ ಮಾಡಲಾಗುತ್ತಿದೆ.

ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಹಲವು ಯೋಜನೆ ಕೈಗೆತ್ತಿಕೊಂಡಿದ್ದು, ಹೊರ ರಾಜ್ಯಗಳಲ್ಲಿಯೂ ಘಟಕ ಆರಂಭಕ್ಕೆ ನಿರ್ಧರಿಸಿದೆ. | ಸತೀಶ್ ಎಂಡಿ, ಕೆಎಂಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net