

ಕೆ.ಆರ್.ಪೇಟೆ: ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಸಬಲೀಕರಣಗೊಳ್ಳುತ್ತಿದೆ. ಹಾಗಾಗಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅರ್ಹರು ಯೋಜನೆಯಿಂದ ವಂಚಿತರಾಗಬಾರದು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ಕಾರಣಾಂತರಗಳಿಂದ ಕೆಲ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದನ್ನು ಸಂಬಂಧಪಟ್ಟ ಫಲಾನುಭವಿಗಳು ಕಚೇರಿಗೆ ಬಂದಾಗ ಸರಿಪಡಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಮಾರ್ಗವಾಗಿ ಚಿಲ್ಲದಹಳ್ಳಿ, ನಗರೂರು, ಮಾರ್ಗೋನಹಳ್ಳಿ, ಬಳ್ಳೇಕೆರೆಯ ಮೂಲಕ ಪ್ರತಿದಿನ 3 ಟ್ರಿಪ್ ಸಾರಿಗೆ ಬಸ್ ಸಂಚರಿಸಿದರೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಅಧಿಕಾರಿ, ಕೂಡಲೇ ಮಾರ್ಗದ ಸರ್ವೇ ಮಾಡಿಸಿ, ಮೇಲಾಧಿಕಾರಿಗಳ ಸಲಹೆ ಪಡೆದುಕೊಂಡು, ಅಗ್ರಹಾರಬಾಚಹಳ್ಳಿ ಮಾರ್ಗದಲ್ಲಿ ಬಸ್ ಓಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಯುವನಿಧಿಗೆ ಒಟ್ಟು 816 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 550 ಪದವೀಧರ ಅಭ್ಯರ್ಥಿಗಳಿಗೆ ತಲಾ 3000 ಸಾವಿರ ರೂ., 12 ಡಿಪ್ಲೊಮಾ ಅಭ್ಯರ್ಥಿಗಳಿಗೆ 1500 ರೂ. ಸೇರಿದಂತೆ 80.85 ಲಕ್ಷ ರೂ. ನೀಡಲಾಗುತ್ತಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಒಟ್ಟು 67,123 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇನ್ನೂ 3869 ಸಾವಿರ ಮಂದಿ ಬಾಕಿ ಇದ್ದಾರೆ. ಇದೂವರೆವಿಗೂ ಸುಮಾರು 38 ಕೋಟಿ ರೂ. ವಿದ್ಯುತ್ ಬಿಲ್ ಅನ್ನು ಸರ್ಕಾರವು ಫಲಾನುಭವಿಗಳ ಪರವಾಗಿ ಸೆಸ್ಕ್‌ಗೆ ಪಾವತಿ ಮಾಡಿದೆ. ತಾಲೂಕಿನಲ್ಲಿ ಇದುವರೆಗೆ 7.28 ಲಕ್ಷ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಬಾಬ್ತು ಸಬ್ಸಿಡಿ 2.13 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ಪಾವತಿ ಮಾಡಿದೆ ಎಂದು ಆಯಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಸಿ.ಆರ್.ಪಿ.ಕುಮಾರ್, ಬಂಡಿಹೊಳೆ ಯೋಗೇಶ್(ಉಮೇಶ್), ದೊಡ್ಡತಾರಹಳ್ಳಿ ಸೋಮಶೇಖರ್, ಕೆಎಸ್‌ಆರ್‌ಟಿಸಿ ಶಿವಣ್ಣ, ಕನಕದಾಸನಗರ ಶಿವಮ್ಮ, ಸಿಂಧುಘಟ್ಟ ಅಫೀಜ್ ಉಲ್ಲಾ, ಬೂಕನಕೆರೆ ರೂಪಾ, ಯಗಚಗುಪ್ಪೆ ಶಿವಲಿಂಗಪ್ಪ, ಬೊಮ್ಮೇನಹಳ್ಳಿ ಲತಾ, ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮಾ, ಡಿಪೋ ಮ್ಯಾನೇಜರ್ ಪಿ.ವನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ಅಕ್ಕಮಹಾದೇವಿ, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಟಿ.ನರಸಿಂಹರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ಚೈತ್ರಾ ಕೆ. ಇದ್ದರು.