ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ತಿಹಾರ್​ ಜೈಲು ಅಧಿಕಾರಿಗಳು ಪವನ್​ ಜಲ್ಲಾದ್​ರನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?

Pawan Jallad 11 jan 20
Published on

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧವಾಗಿರುವ ಹ್ಯಾಂಗ್​​ಮನ್ ಹೆಸರು​ ಪವನ್​ ಜಲ್ಲಾದ್​. ಇವರನ್ನು ತಿಹಾರ ಜೈಲು ಅಧಿಕಾರಿಗಳು ಬಾಡಿಗೆಗೆ ನೇಮಿಸಿಕೊಂಡಿದ್ದು, ಜನವರಿ 22ರಂದು ಅಪರಾಧಿಗಳನ್ನು ಪವನ್​ ಗಲ್ಲಿಗೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪವನ್​ ಶುಕ್ರವಾರ ಮೀರತ್​ ಜೈಲಿಗೆ ತೆರಳಿ ನೇಣುಗಂಬ ಮತ್ತು ಅದರ ಆವರಣವನ್ನೊಮ್ಮೆ ಪರಿಶೀಲಿಸಿದರು.

ಅಂದಹಾಗೆ ಅಪರಾಧಿಗಳನ್ನು ನೇಣಿಗೇರಿಸಲು ಪವನ್​ರನ್ನು ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯ ಪ್ರಮುಖ ಕಾರಣ ಪವನ್​ ಹ್ಯಾಂಗ್​ಮನ್​ ಕುಟುಂಬದಿಂದ ಬಂದವರು. ಹೀಗಾಗಿ ಗಲ್ಲಿಗೇರಿಸುವಾಗ ಪ್ರಮಾದವಾಗುವ ಸಾಧ್ಯತೆ ತುಂಬಾ ವಿರಳ. ಎರಡನೆಯದು ಅವಶ್ಯಕತೆಗೆ ತಕ್ಕಂತೆ ಪವನ್​ ದೈಹಿಕವಾಗಿ ಸಮರ್ಥರಾಗಿದ್ದು, ಕಣ್ಣಿನ ದೃಷ್ಟಿಯೂ ಕೂಡ ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಅಪರಾಧಿಗಳನ್ನು ಗಲ್ಲಿಗೇರಿಸುವ ಪವನ್​ ಅವರ ಭದ್ರತಾ ವ್ಯವಸ್ಥೆಗಳು ರಹಸ್ಯವಾಗಿಯೇ ಇರುತ್ತದೆ.

ಅಪರಾಧಿಗಳನ್ನು ಮರಣದಂಡನೆ ಶಿಕ್ಷೆಗೆ ಗುರಿಯಾಗಿಸುವುದನ್ನು ಎದುರ ನೋಡುತ್ತಿರುವ ಪವನ್​, ನಾನು ಬಹುತೇಕ ಕುಸಿದು ಹೋಗಿದ್ದೆ. ಮಗಳ ಮದುವೆಗೆ ದುಡ್ಡು ಹೊಂದಿಸುವುದು ಹೇಗೆಂದು ತಿಳಿಯದೇ ಹೋಗಿತ್ತು. ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಅದೇ ರೀತಿ ಹಿರಿಯರು ಕಟ್ಟಿಸಿದ ಮನೆ ಕುಸಿದು ಬೀಳುವ ಹಂತದಲ್ಲಿದೆ. ಅದನ್ನು ದುರಸ್ಥಿ ಮಾಡಲು ದುಡ್ಡಿಲ್ಲ. ಈಗಾಗಲೇ ಸಾಲದಲ್ಲಿದ್ದೇನೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಹೀಗಾಗಿ ಹಲವು ತಿಂಗಳುಗಳಿಂದ ದೇವರ ಮೊರೆ ಹೋಗುತ್ತಿದ್ದೆ. ಕೊನೆಗೂ ದೇವರು ನನ್ನ ಕೂಗಿಗೆ ಕರಗಿದ್ದಾನೆ. ತಿಹಾರ್​ ಜೈಲಿನಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಒಪ್ಪಿಸಿದ್ದಾನೆ. ಇದನ್ನು ನಿರ್ವಹಿಸಿದರೆ ಸರ್ಕಾರ ನನಗೆ ಒಂದು ಲಕ್ಷ ರೂಪಾಯಿ ಕೊಡುತ್ತದೆ. ಅದನ್ನು ನಾನು ಮಗಳ ಮದುವೆಗೆ ಬಳಸುವೆ. ನನಗೆ ಹೊಸ ಬದುಕು ಕೊಡಲಿದೆ ಈ ಕೆಲಸ ಎಂದಿದ್ದಾರೆ.

ಅಂದಹಾಗೆ ಪವನ್​ ಉತ್ತರ ಪ್ರದೇಶದ ಮೇರಠ್​ನಲ್ಲಿ ಕಾನ್ಶೀರಾಂ ಆವಾಸ್ ಯೋಜನೆ ಅಡಿ ಸಿಕ್ಕ ಚಿಕ್ಕ ಸಿಂಗಲ್ ರೂಮ್ ಮನೆಯಲ್ಲಿ ವಾಸವಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net