ಚುನಾವಣಾ ಬಾಂಡ್‌: 1368 ಕೋಟಿ ರೂ.ದೇಣಿಗೆ ನೀಡಿದ ಸ್ಯಾಂಟಿಯಾಗೊ ಮಾರ್ಟಿನ್ ಯಾರು?, ಕಾರ್ಮಿಕನೊಬ್ಬ ಲಾಟರಿ ಕಿಂಗ್ ಆಗಿದ್ದು ಹೇಗೆ?

martin
Published on

ನವದೆಹಲಿ: ಚುನಾವಣಾ ದೇಣಿಗೆ ನೀಡಲು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ. ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಯೋಗಕ್ಕೆ ಈ ಮಾಹಿತಿಯನ್ನು ಸಲ್ಲಿಸಿತ್ತು. ಈ ಪಟ್ಟಿಯ ಪ್ರಕಾರ ಅತಿ ಹೆಚ್ಚು ಚುನಾವಣಾ ದೇಣಿಗೆ ನೀಡಿದ ಕಂಪನಿ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್. ಈ ಕಂಪನಿಗಳು 'ಲಾಟರಿ ಕಿಂಗ್' ಎಂದು ಪ್ರಸಿದ್ಧವಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಎಂಬ ವ್ಯಕ್ತಿಗೆ ಸೇರಿದೆ.

ಸ್ಯಾಂಟಿಯಾಗೊ ಮಾರ್ಟಿನ್ ಅವರ ಚಾರಿಟಬಲ್ ಟ್ರಸ್ಟ್‌ನ ವೆಬ್‌ಸೈಟ್ ಪ್ರಕಾರ, ಸ್ಯಾಂಟಿಯಾಗೊ ಮಾರ್ಟಿನ್ ಮಯನ್ಮಾರ್​​​​​​​​ನ ಯಾಂಗೋನ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. 1988 ರಲ್ಲಿ ಭಾರತಕ್ಕೆ ಮರಳಿ, ತಮಿಳುನಾಡಿನಲ್ಲಿ ಲಾಟರಿ ವ್ಯವಹಾರವನ್ನು ಪ್ರಾರಂಭಿಸಿದರು. ಈಶಾನ್ಯಕ್ಕೆ ಬರುವ ಮೊದಲು, ಸ್ಯಾಂಟಿಯಾಗೊ ತನ್ನ ವ್ಯವಹಾರವನ್ನು ಕರ್ನಾಟಕ ಮತ್ತು ಕೇರಳಕ್ಕೂ ವಿಸ್ತರಿಸಿದ್ದರು. ಈಶಾನ್ಯದಲ್ಲಿ ಸರ್ಕಾರಿ ಲಾಟರಿ ಯೋಜನೆಗಳೊಂದಿಗೆ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಭಾರತದ ಹೊರಗೆ ಅಂದರೆ ಭೂತಾನ್ ಮತ್ತು ನೇಪಾಳದಲ್ಲಿಯೂ ಲಾಟರಿ ವ್ಯವಹಾರ ಮಾಡಿದರು. ವೆಬ್‌ಸೈಟ್ ಪ್ರಕಾರ, ಮಾರ್ಟಿನ್ ನಂತರ ನಿರ್ಮಾಣ, ರಿಯಲ್ ಎಸ್ಟೇಟ್, ಜವಳಿ ಮತ್ತು ಆತಿಥ್ಯ ಮುಂತಾದ ಕ್ಷೇತ್ರಗಳಲ್ಲಿ ಬ್ಯುಸಿನೆಸ್​​​​ ಮಾಡಲು ಪ್ರಾರಂಭಿಸಿದರು.

900 ಕೋಟಿ ಹಗರಣದ ಆರೋಪ, ಇಡಿ ತನಿಖೆ
ಈ ಲಾಟರಿ ಕಿಂಗ್ ಹೆಸರು ಹಗರಣಗಳಲ್ಲಿಯೂ ಭಾಗಿಯಾಗಿದೆ. ಜಾರಿ ನಿರ್ದೇಶನಾಲಯ (ED) 2019 ರಿಂದ ಆಪಾದಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಫ್ಯೂಚರ್ ಗೇಮಿಂಗ್ ಬಗ್ಗೆ ತನಿಖೆ ನಡೆಸುತ್ತಿದೆ. ಕಳೆದ ವರ್ಷ ಮೇನಲ್ಲಿ ಇಡಿ ಕೊಯಮತ್ತೂರು ಮತ್ತು ಚೆನ್ನೈನಲ್ಲಿ ದಾಳಿ ನಡೆಸಿತ್ತು. ಈ ಅವಧಿಯಲ್ಲಿ ಅವರ 457 ಕೋಟಿ ಮೌಲ್ಯದ ಆಸ್ತಿಯನ್ನು ಸ್ಥಗಿತಗೊಳಿಸಲಾಗಿತ್ತು. ವರದಿಗಳ ಪ್ರಕಾರ, ಇಡಿ ತನಿಖೆಯು ಸಿಬಿಐ ಚಾರ್ಜ್ ಶೀಟ್ ಆಧರಿಸಿದೆ. ಕೇರಳದಲ್ಲಿ ಸಿಕ್ಕಿಂ ಸರ್ಕಾರದ ಲಾಟರಿಯನ್ನು ಮಾರ್ಟಿನ್ ಕಂಪನಿ ಮಾರಾಟ ಮಾಡುತ್ತಿತ್ತು ಎಂದು ಆರೋಪಿಸಲಾಗಿದೆ. ಅವರು ಏಪ್ರಿಲ್ 2009 ರಿಂದ ಆಗಸ್ಟ್ 2010 ರವರೆಗೆ ಲಾಟರಿ ಟಿಕೆಟ್ ಗೆಲ್ಲುವ ಹಕ್ಕುಗಳನ್ನು ಉತ್ಪ್ರೇಕ್ಷಿಸಿದರು ಮತ್ತು ಸಿಕ್ಕಿಂಗೆ 910 ಕೋಟಿ ರೂಪಾಯಿಗಳನ್ನು ವಂಚಿಸಿದರು.

ದೇಣಿಗೆ: ಯಾರಿಗೆ ಎಷ್ಟು?
ಚುನಾವಣಾ ಆಯೋಗದ ಪಟ್ಟಿಯ ಪ್ರಕಾರ, ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 2019 ಮತ್ತು 2024 ರ ನಡುವೆ 1368 ರೂಪಾಯಿಗಳ ಚುನಾವಣಾ ದೇಣಿಗೆಗಳನ್ನು ನೀಡಿವೆ. 977 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 410 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ ಕ್ವಿಕ್‌ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಮೂರನೇ ಸ್ಥಾನದಲ್ಲಿದೆ. ಎಸ್‌ಬಿಐನಿಂದ 12,155 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಏಪ್ರಿಲ್ 12, 2019 ಮತ್ತು ಜನವರಿ 24, 2024 ರ ನಡುವೆ ಖರೀದಿಸಲಾಗಿದೆ. ಈ ಪೈಕಿ ಬಿಜೆಪಿ ಗರಿಷ್ಠ 6060.5 ಕೋಟಿ ರೂ., ಟಿಎಂಸಿ 1609.5 ಕೋಟಿ ರೂ., ಕಾಂಗ್ರೆಸ್ 1214.9 ಕೋಟಿ ರೂ. ದೇಣಿಗೆ ಪಡೆದಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net