

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್ ಅಪ್ಗಳ ಸಂಖ್ಯೆ ಹೆಚ್ಚಿದೆ. ಕೆಲವರಂತೂ ಎಳೆಯ ಪ್ರಾಯದಲ್ಲೇ ಸ್ವಂತ ಉದ್ಯಮ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಆದರೆ ಇಲ್ಲೊಬ್ಬಳು ಬಿ.ಟೆಕ್ ಪದವಿ ಪಡೆದ ಯುವತಿ ಪಾನಿಪುರಿ ಮಾರಾಟ ಮಾಡುವ ಮೂಲಕವಾಗಿ ನಿರುದ್ಯೋಗಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ದೆಹಲಿಯ ನಿವಾಸಿ ತಾಪ್ಸಿ ಉಪಾಧ್ಯಾಯ ಬಿ.ಟೆಕ್ ಪದವಿ ಪಡೆದಿದ್ದಾರೆ. ಪದವಿ ಮುಗಿಯುತ್ತಿದ್ದಂತೆ ಎಲ್ಲರಂತೆ ಉದ್ಯೋಗಕ್ಕಾಗಿ ಕಂಪನಿಯಿಂದ ಕಂಪನಿಗೆ ಅಲೆದಾಟ ನಡೆಸಲಿಲ್ಲ. ಈ ಈಕೆ ಸ್ವಂತ ಉದ್ಯಮ ಪ್ರಾರಂಭಿಸುವ ನಿರ್ಧಾರ ಕೈಗೊಂಡು ಪಾನಿಪುರಿ ಅಂಗಡಿ ಪ್ರಾರಂಭಿಸಿದರು. ಬುಲೆಟ್ ಮೇಲೇರಿ ಅದಕ್ಕೆ ಪಾನಿಪುರಿ ಗಾಡಿಯನ್ನು ಜೋಡಿಸಿಕೊಂಡು ದೆಹಲಿಯ ಜೈಲ್ ರೋಡ್ ಮೆಟ್ರೋ ಸ್ಟೇಷನ್ ಬಳಿ ತನ್ನ ವ್ಯಾಪಾರ ಪ್ರಾರಂಭಿಸಿಯೇ ಬಿಟ್ಟಳು.
ಹಲವರು ಈ ಕಾರಣಕ್ಕೆ ತಾಪ್ಸಿ ಅವರನ್ನು ಗೇಲಿ ಕೂಡ ಮಾಡಿರಬಹುದು. ಕೇವಲ 21 ವರ್ಷದ ತಾಪ್ಸಿ ಉಪಾಧ್ಯಾಯ ಎಂಬ ಈ ಹುಡುಗಿ ಇಂದು ದೆಹಲಿಯಲ್ಲಿ ಬಿ.ಟೆಕ್ ಪಾನಿಪುರಿವಾಲಿ ಎಂದೇ ಜನಪ್ರಿಯತೆ ಗಳಿಸಿದ್ದಾಳೆ.
ತಾಪ್ಸಿ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಉದ್ಯೋಗ ಸಿಕ್ಕಿಲ್ಲ ಎಂದು ಬರಿಗೈಲಿ ಕುಳಿತಿರುವ ಅದೆಷ್ಟೋ ಯುವಕ, ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸ್ಫೂರ್ತಿಯಾಗಿದ್ದಾರೆ. ಈ ಸ್ಟಾಲ್ ನಲ್ಲಿ ಇನ್ನಷ್ಟು ಸ್ಟ್ರೀಟ್ ಫುಡ್ ಗಳನ್ನು ಪರಿಚಯಿಸುವ ಬಯಕೆ ಹೊಂದಿದ್ದು, ಆ ಮೂಲಕ ಜನರಿಗೆ ಆರೋಗ್ಯಕರ ಸ್ಟ್ರೀಟ್ ಫುಡ್ ಒದಗಿಸುವ ಉದ್ದೇಶ ಹೊಂದಿದ್ದಾರೆ.