ನಕಲಿ MBBS, BAMS ಪದವಿಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ! Meerut

scam
Published on

Meerut | ನಕಲಿ ಎಂಬಿಬಿಎಸ್ ಹಾಗೂ ಬಿಎಎಂಎಸ್ ಪದವಿಗಳನ್ನು ಸೃಷ್ಟಿಸುವ ಮೂಲಕ ಜನರನ್ನು ವಂಚಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​ನ ಇಬ್ಬರು ಆರೋಪಿಗಳನ್ನ ಮೀರತ್‌ನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ನಕಲಿ ಪದವಿ ಪ್ರಮಾಣಪತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಸಾಮಗ್ರಿಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಬಿಲಾಲ್ ಮತ್ತು ಸೂರಜ್ ಪ್ರಕಾಶ್ ಎಂದು ಗುರುತಿಸಲಾಗಿದೆ. ಮೀರತ್‌ನ ಭಟ್ವಾರಾ ನಿವಾಸಿ ಅರ್ಪಿತ್ ಜೈನ್ ಅವರ ದೂರಿನ ಆಧಾರದ ಮೇಲೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ರೊಮೇನಿಯಾದಲ್ಲಿ ಎಂಬಿಬಿಎಸ್ ಪ್ರವೇಶ ಪಡೆಯುವುದಾಗಿ ಹೇಳಿ ಸೂರಜ್ ಪ್ರಕಾಶ್ ನನ್ನ ಬಳಿ 5.8 ಲಕ್ಷ ರೂ. ಹಣ ಪಡೆದು ಹಣವನ್ನ ಹಿಂದಿರುಗಿಸದೆ ನಕಲಿ ಪ್ರಮಾಣಪತ್ರ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳನ್ನು ತಲುಪಿ ಆನ್‌ಲೈನ್‌ನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅಕ್ರಮ ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ತನಿಖೆಯ ಸಮಯದಲ್ಲಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ನೀಡಲಾದ ನಕಲಿ ಪ್ರಮಾಣಪತ್ರಗಳು, ಅಂಕಪಟ್ಟಿಗಳು ಮತ್ತು ಪದವಿಗಳನ್ನು ಪತ್ತೆಹಚ್ಚಿದ್ದಾರೆ. ಬಿಲಾಲ್​ ಮತ್ತು ಸೂರಜ್ ಪ್ರಕಾಶ್ ಅವರ ಮೊಬೈಲ್ ಫೋನ್ ಅನ್ನು ಮತ್ತಷ್ಟು ಪರಿಶೀಲಿಸಿದಾಗ ನಕಲಿ ಪದವಿ ಪಡೆದ ಇತರ ವಿದ್ಯಾರ್ಥಿಗಳ ಮಾಹಿತಿ ಕಂಡು ಬಂದಿದೆ.

ಡಿಜಿಟಲ್ ಸಾಕ್ಷ್ಯಾಧಾರಗಳ ಮೇಲೆ ಪೊಲೀಸರು ಜಾನ್‌ಪುರದ ಆರೋಪಿ ಬಿಲಾಲ್‌ನನ್ನು ಪತ್ತೆ ಹಚ್ಚಿದ್ದಾರೆ. ಈತ ಬ್ರಜೇಶ್ ಕುಮಾರ್ ಎಂಬ ನಕಲಿ ಗುರುತಿನ ಚೀಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆತನ ಬಂಧನದ ನಂತರ ಮೂರು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್​ಅನ್ನು ವಶಪಡಿಸಿಕೊಳ್ಳಲಾಯಿತು, ಇದರಲ್ಲಿ ಭಾರತದಾದ್ಯಂತ ಸುಮಾರು 15 ವಿಶ್ವವಿದ್ಯಾಲಯಗಳ ಡೇಟಾ ಇತ್ತು. ಈ ಇಬ್ಬರೂ ಸೇರಿ ಸಾಮಾನ್ಯ ಜನರಿಗೆ ನಕಲಿ ಪದವಿ ನೀಡುವುದಾಗಿ 10 ರಿಂದ 15 ಲಕ್ಷ ರೂ. ಹಣ ಲಪಟಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಅಭಿಷೇಕ್ ಯಾದವ್ ಎಂಬ ಮತ್ತೊಬ್ಬ ಆರೋಪಿಯ ಹೆಸರು ಕೇಳಿ ಬಂದಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net