

ಮೇರಠ್: ದೇಶಾದ್ಯಂತ ಕರೋನಾ ವೈರಸ್ ಸೋಂಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ ತಬ್ಲಿಘಿ ಜಮಾತ್ನ ಕೆಲವು ಸದಸ್ಯರ ದುರ್ವರ್ತನೆ ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿದೆ. ಇಂತಹ ವರ್ತನೆಯಿಂದ ಬೇಸತ್ತಿದ್ದ ಉತ್ತರ ಪ್ರದೇಶದ ಹಾಸ್ಪಿಟಲ್ ಒಂದರ ಆಡಳಿತ ಮಂಡಳಿ ಶುಕ್ರವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಜಾಹೀರಾತು ಕೂಡ ವ್ಯಾಪಕ ಟೀಕೆಗೆ ಒಳಗಾಯಿತು.
ವಾಲೆಂಟಿಸ್ ಕ್ಯಾನ್ಸರ್ ಹಾಸ್ಪಿಟಲ್ ಜಾಹೀರಾತು ನೀಡಿದ ಆಸ್ಪತ್ರೆ. ಶುಕ್ರವಾರ ಪ್ರಕಟಿಸಿದ ಜಾಹೀರಾತಿನಲ್ಲಿ ಸರ್ಕಾರದ ನಿರ್ದೇಶನ, ಮಾರ್ಗಸೂಚಿಗಳು ಮನವಿಯ ರೂಪದಲ್ಲಿತ್ತು. ಆದರೆ, ಅದರಲ್ಲಿ ತಬ್ಲಿಘಿ ಜಮಾತ್ನ ಹೆಸರು ಉಲ್ಲೇಖವಾಗಿದ್ದು, ಮುಸ್ಲಿಮರಿಗೆ ಚಿಕಿತ್ಸೆ ಬೇಕು ಎಂದಾದರೆ ಕಡ್ಡಾಯವಾಗಿ ನಿಯಮಪಾಲನೆ ಮಾಡಬೇಕು ಎಂಬ ಅಂಶವೂ ಇತ್ತು. ಈ ಜಾಹೀರಾತು ಪ್ರಕಟವಾದ ಬೆನ್ನಲ್ಲೇ ವ್ಯಾಪಕ ಟೀಕೆಯನ್ನು ಆಸ್ಪತ್ರೆ ಎದುರಿಸಬೇಕಾಯಿತು.
ಈ ಸಂಬಂಧ ಪೊಲೀಸ್ ಕೇಸ್ ದಾಖಲಾಗಿದೆ. ಅಲ್ಲದೆ, ಮೇರಠ್ನ ಮುಖ್ಯ ವೈದ್ಯಕೀಯ ಅಧಿಕಾರಿ ರಾಜ್ ಕುಮಾರ್ ಅವರು ಆಸ್ಪತ್ರೆಗೆ ನೋಟಿಸ್ ಕಳುಹಿಸಲಾಗುವುದು. ಈ ರೀತಿ ಮಾಡಬಾರದಾಗಿತ್ತು. ಅದು ನಿಜವಾಗಿಯೂ ತಪ್ಪು ಎಂದು ಹೇಳಿದ್ದಾರೆ. (ಏಜೆನ್ಸೀಸ್)