‘ಕರೊನಾ ನೆಗೆಟಿವ್‌ ಪ್ರಮಾಣಪತ್ರ ಬೇಕೇ ಇಲ್ಲಿ ಬನ್ನಿ’ ಎಂದಿದ್ದ ಆಸ್ಪತ್ರೆ!

corona lab test
Published on

ಮೀರತ್‌: ಕ್ಷಣಕ್ಷಣಕ್ಕೂ ಕರೊನಾ ಆತಂಕ ಸೃಷ್ಟಿಸುತ್ತಿರುವ ಬೆನ್ನಲ್ಲೇ ಇದನ್ನೇ ಬಂಡವಾಳ ಮಾಡಿಕೊಂಡಿರುವ ಉತ್ತರ ಪ್ರದೇಶದ ಮೀರತ್‌ನ ನರ್ಸಿಂಗ್‌ ಹೋಂ ಒಂದು ಹಣ ಮಾಡುವ ದಂಧಗೆ ಇಳಿದು ಆತಂಕ ಸೃಷ್ಟಿಸಿದೆ.

ನಿಮಗೆ ಕರೊನಾ ನೆಗೆಟಿವ್‌ ಪ್ರಮಾಣಪತ್ರ ಬೇಕೇ ಇಲ್ಲಿ ಬನ್ನಿ ಎಂದು ಈ ನರ್ಸಿಂಗ್‌ ಹೋಂ ಹೇಳುತ್ತಿದ್ದು, ಅದೆಷ್ಟು ಮಂದಿಗೆ ನಕಲಿ ಪ್ರಮಾಣ ಪತ್ರ ನೀಡಲಾಗಿದೆಯೋ ತಿಳಿಯದಾಗಿದೆ. ಇಂಥ ಆರೋಪ ಹೊತ್ತ ನರ್ಸಿಂಗ್‌ ಹೋಂನ ಪರವಾನಗಿಯನ್ನು ಇದೀಗ ಉತ್ತರ ಪ್ರದೇಶ ಸರ್ಕಾರ ರದ್ದು ಮಾಡಿದೆ.

2500 ರೂಪಾಯಿ ಕೊಟ್ಟರೆ ನೆಗೆಟಿವ್‌ ವರದಿ ನೀಡುವುದಾಗಿ ಈ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಮ್ಮ ಆಸ್ಪತ್ರೆಯಲ್ಲಿ ಇಷ್ಟು ಹಣ ಪಾವತಿಸಿದರೆ ಕರೊನಾ ಸೋಂಕು ಇದ್ದರೂ ನೆಗೆಟಿವ್‌ ವರದಿ ನೀಡಲಾಗುವುದು, ಇದರಿಂದ ನೀವು ಯಾವುದೇ ಸಮಸ್ಯೆಯಿಲ್ಲದೇ ಎಲ್ಲೆಡೆ ಓಡಾಡಿಕೊಂಡಿರಬಹುದು ಎನ್ನುವುದು ಈ ಆಸ್ಪತ್ರೆಯ ಹೇಳಿಕೆಯಾಗಿತ್ತು!

ಈ ವಿಡಿಯೋ ವೈರಲ್‌ ಆದ ಬಳಿಕ ಆಸ್ಪತ್ರೆಯ ಪರವಾನಗಿಯನ್ನು ರದ್ದು ಮಾಡಲಾಗಿದೆ. ಪರವಾನಗಿ ರದ್ದತಿ ಕುರಿತು ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾ ಮಾಹಿತಿ ನೀಡಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಈ ರೀತಿ ಏನಾದರೂ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿದಲ್ಲಿ ಇಲ್ಲಿಯವರೆಗೆ 26,554 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 18,154 ಮಂದಿ ಗುಣಮುಖರಾಗಿದ್ದು 773 ಸಾವು ಸಂಭವಿಸಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net