ಅದನ್ನೆಲ್ಲ ನೋಡಿಯೇ ಖಿನ್ನತೆಗೆ ಒಳಗಾಗಿದ್ದೆ: ಕಹಿ ನೆನಪು ಹಂಚಿಕೊಂಡ 'ಲಕ್ಕಿ' ಹೀರೋಯಿನ್​ | Meenakshi

ವಿಜಯವಾಣಿ (57)
Published on

Meenakshi Chaudhary: 2024ರ ಮೊದಲ ತಿಂಗಳಲ್ಲೇ ಮಹೇಶ್​ ಬಾಬು ಜತೆಗೆ 'ಗುಂಟೂರು ಕಾರಂ' ಚಿತ್ರದ ಮೂಲಕ ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡಿದ ನಟಿ ಮೀನಾಕ್ಷಿ ಚೌಧರಿ, ತದನಂತರ ಸ್ಟಾರ್​ ನಟರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅವಕಾಶ ಪಡೆದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಗಿಟ್ಟಿಸಿಕೊಂಡರು. ಕಳೆದ ವರ್ಷ ಮೀನಾಕ್ಷಿ ಅಭಿನಯದ ಆರು ಸಿನಿಮಾಗಳು ರಿಲೀಸ್ ಆಗಿದ್ದೇ ಆದರೂ ಅದರಲ್ಲಿ ಬಾಕ್ಸ್ ಆಫೀಸ್​ ಹಾಗೂ ಪ್ರೇಕ್ಷಕರಿಂದ ಹಿಟ್ ಆದ ಸಿನಿಮಾ ಮಾತ್ರ 'ಲಕ್ಕಿ ಭಾಸ್ಕರ್​'.

ಉದಯೋನ್ಮುಖ ನಟಿ

2024ರಲ್ಲಿ ಆರು ಸಿನಿಮಾಗಳ ಬಿಡುಗಡೆ ನೋಡಿದ ಉದಯೋನ್ಮುಖ ನಟಿಯಾಗಿ ಸದ್ಯ ಟಾಲಿವುಡ್​ನಲ್ಲಿ ಮಿಂಚುತ್ತಿರುವ ಮೀನಾಕ್ಷಿ ಚೌಧರಿ, ತಾನು ಅಭಿನಯದ ಐದು ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡದಿದ್ದರೂ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯುತ್ತಿರುವುದು ಸದ್ಯ ಅನೇಕರ ಹುಬ್ಬೇರಿಸಿದೆ. ಮುಂಬರುವ ವೆಂಕಟೇಶ್ ನಟನೆಯ ಹಾಗೂ ಅನಿಲ್ ರವಿಪುಡಿ ನಿರ್ದೇಶನದ 'ಸಂಕ್ರಾಂತಿಕಿ ವಸ್ತುನ್ನಂ' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮೀನಾಕ್ಷಿ ಸಿದ್ಧರಾಗಿದ್ದಾರೆ. ಈ ಮಧ್ಯೆ ತಮಗಾದ ಕಹಿ ಅನುಭವವೊಂದರ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಮುಕ್ತವಾಗಿ ಮಾತನಾಡಿದ್ದಾರೆ.

'ದಿ ಗೋಟ್'

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಹಲವು ವಿಷಯಗಳನ್ನು ಹಂಚಿಕೊಂಡ ಮೀನಾಕ್ಷಿ, "ಕಳೆದ ವರ್ಷ ದಳಪತಿ ವಿಜಯ್ ಅವರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ದಿ ಗೋಟ್) ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನನ್ನ ಅಭಿನಯಕ್ಕಾಗಿ ಜಾಲತಾಣಗಳಲ್ಲಿ ಕಟುವಾಗಿ ಟ್ರೋಲ್ ಮಾಡಲಾಯಿತು. ಸೋಷಿಯಲ್ ಮೀಡಿಯಾ ತೆರೆದಾಗ ಇಂತಹ ನೆಗೆಟಿವ್ ಟ್ರೋಲ್​ಗಳೇ ತುಂಬಿ ಹೋಗಿತ್ತು. ಬ್ಯಾಕ್ ಟು ಬ್ಯಾಕ್​ ಟೀಕೆಗಳನ್ನು ನೋಡಿ ಒಂದು ವಾರ ನಾನು ಖಿನ್ನತೆಗೆ ಒಳಗಾಗಿದ್ದೆ" ಎಂದಿದ್ದಾರೆ.

ಲಕ್ಕಿ ಆಯಿತು 'ಲಕ್ಕಿ ಭಾಸ್ಕರ್​'

ಇತ್ತೀಚೆಗಷ್ಟೇ ನಟ ದುಲ್ಕರ್​ ಸಲ್ಮಾನ್ ಅಭಿನಯದ ತೆಲುಗು ಬ್ಲಾಕ್​ಬಸ್ಟರ್​ 'ಲಕ್ಕಿ ಬಾಸ್ಕರ್'​ ಚಿತ್ರದಲ್ಲಿ ಭಾಸ್ಕರ್​ ಪತ್ನಿಯಾಗಿ ನಟಿಸಿದ ಮೀನಾಕ್ಷಿಗೆ ಈ ಸಿನಿಮಾ ಅಗಾಧ ಯಶಸ್ಸನ್ನು ನೀಡಿತು. ಇದರೊಟ್ಟಿಗೆ ಚಿತ್ರದಲ್ಲಿ ನಟಿಯ ಅಭಿನಯಕ್ಕೆ ಫಿದಾ ಆದ ಸಿನಿಪ್ರಿಯರು, ಆಕೆಯ ನಟನೆಗೆ ಮೆಚ್ಚಿ, ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಪ್ರಸ್ತುತ ನವೀನ್ ಪೋಲಿಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅನಗನಗ ಒಕ ರಾಜು' ಚಿತ್ರಕ್ಕೆ ಸಹಿ ಹಾಕಿರುವ ಮೀನಾಕ್ಷಿ, 'ರಾಜ ಸಾಬ್'​, 'ಸಂಕ್ರಾಂತಿಕಿ ವಸ್ತುನ್ನಂ' ಸೇರಿದಂತೆ ಮುಂತಾದ ಚಿತ್ರಗಳ ಮೂಲಕ 2025ರಲ್ಲಿ ಪ್ರೇಕ್ಷಕರನ್ನು ರಂಜಿಸಲು ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net