ಕೆಲಸದ ಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧನ ಧ್ಯಾನ

ಧ್ಯಾನ
ಧ್ಯಾನ
Published on
ಈ ಭೂಮಿಯಲ್ಲಿ ಅತೀ ಕ್ಲಿಷ್ಟವಾದ ಕೆಲಸವೆಂದರೆ ಮಾನವ ಸಂಪನ್ಮೂಲಗಳನ್ನು ನಿಭಾಯಿಸುವುದು. ಮಾನವರ ಮನೋ ವೃತ್ತಿಯು ಅತೀ ಜಟಿಲವಾದದ್ದು. ಇಂತಹ ಮನಸ್ಸನ್ನು ಹೇಗೆ ನಿಭಾಯಿಸುವುದು? ಮನಸ್ಸಿನಲ್ಲಿ ಉಂಟಾಗುವ ಭಾವನಾತ್ಮಕ ಏರು ಪೇರುಗಳನ್ನು ಹೇಗೆ ನಿಯಂತ್ರಿಸುವುದು? ಮನಸ್ಸು ನಮ್ಮ ಕೆಲಸದ ಮೇಲೆ, ನಮ್ಮ ದೇಹದ ಮೇಲೆ, ನಮ್ಮ ಆರೋಗ್ಯದ ಮೇಲೆ, ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುವ ರೀತಿಯು ಬಲು ಆಸಕ್ತಿಕರ. ಮನಸ್ಸು ಸದಾ ಗತಕಾಲ ಮತ್ತು ಭವಿಷ್ಯತ್ಕಾಲದ ನಡುವೆ ತೂಗುತ್ತಿರುತ್ತದೆ. ಗತದ ಬಗ್ಗೆ ಕೋಪದಿಂದಿರುತ್ತದೆ ಅಥವಾ ಭವಿಷ್ಯದ ಬಗ್ಗೆ ಆತಂಕದಿಂದಿರುತ್ತದೆ. 
ಈಗಿನ ಕಾಲದಲ್ಲಿ ಜನತೆ ಹೆಚ್ಚಾಗಿ ಭೇಟಿಯಾಗುವ ಜನರೆಂದರೆ, ಜ್ಯೋತಿಷಿಗಳನ್ನು! ಎಷ್ಟೊಂದು ಆತಂಕವಿದೆ. ಭವಿಷ್ಯದಲ್ಲಿ ನನಗೇನಾಗುತ್ತದೆ? ಇದೇ ಕೆಲಸದಲ್ಲಿರುತ್ತೇನೆಯೆ? ಇದಕ್ಕಿಂತಲೂ ಉತ್ತಮವಾದ ಕೆಲಸ ಸಿಗುತ್ತದೆಯೆ? ನನಗೆ ಬಡ್ತಿ ಸಿಗುತ್ತದೆಯೆ? ನನಗೆ ಒಳ್ಳೆಯ ಸಂಗಾತಿ ಸಿಗುತ್ತಾರೆಯೆ? ಕೊನೆಯಿಲ್ಲದ ಪ್ರಶ್ನೆಗಳು ಮಾನವರ ಮನಸ್ಸನ್ನು ಕಾಡುತ್ತವೆ. ಮನಸ್ಸಿನ ಹೊರೆಯನ್ನು ಇಳಿಸಲು ಒಂದು ಸ್ಥಳ ಬೇಕು

ಅಥವಾ ಅವುಗಳಿಗೆ ಉತ್ತರವನ್ನು ಪಡೆಯಬೇಕು. ಮನಸ್ಸು ಗತದಿಂದ ಭವಿಷ್ಯಕ್ಕೆ ತೂಗುತ್ತಿರುವುದರಿಂದ ಗತದ ನೆನಪುಗಳು ನಮ್ಮನ್ನು ಕಾಡುತ್ತವೆ ಅಥವಾ ನಮ್ಮಲ್ಲಿ ಹಂಬಲವನ್ನು ಉಂಟು ಮಾಡುತ್ತವೆ. ಗತದ ನೆನಪುಗಳು ಭಯ ಮತ್ತು ಆತಂಕವನ್ನು ಸೃಷ್ಟಿಸಬಲ್ಲವು ಮತ್ತು ನಮ್ಮ ಭವಿಷ್ಯದ ದೃಷ್ಟಿಯನ್ನು ವರ್ಣಮಯವಾಗಿಸುತ್ತದೆ.

ನಿಮ್ಮ ಸಹೋದ್ಯೋಗಿಗಳು ದಿನೇ ದಿನೇ ಉತ್ತಮರಾಗುತ್ತಿ ದ್ದಾರೆಯೇ ಅಥವಾ ಕುಂದುತ್ತಿದ್ದಾರೆಯೆ? ಅಟೆನ್ಷನ್ ಡೆಫಿಷಿಯೆನ್ಸಿ ಸಿಂಡ್ರೋಮ್ ಗಮನ ಕೊಡಲು ಸಾಧ್ಯವಾಗದಿರುವುದು ಈಗ ಸರ್ವೆಸಾಮಾನ್ಯವಾಗುತ್ತಿದೆ. ಸಮಾಜದಲ್ಲಿ ಗಮನ ನೀಡುವ ಸಾಮರ್ಥ್ಯವು ಕಡಿಮೆಯಾಗುತ್ತಿದೆ. ಆದ್ದರಿಂದ, ಮನಸ್ಸನ್ನು ಪುನಃ ಕೆಲಸದ ಸ್ಥಳಕ್ಕೆ ಕರೆತರಲು ಒಂದು ಹೊಸ ಪದವನ್ನು ಬಳಸಿದರು-ಮೈಂಡ್ ಫುಲ್ನೆಸ್. ಮೈಂಡ್ ಫುಲ್ನೆಸ್ ಎಂದರೆ ಹೆಚ್ಚು ಜಾಗರೂಕರಾಗಿರುವುದು. ನಮ್ಮ ಅಭಿಪ್ರಾಯದಲ್ಲಿ ಮೈಂಡ್ ಫುಲ್ನೆಸ್​ಒಂದು ದಾರಿಯಷ್ಟೇ. ನಾವು ಸದಾ ಮಹತ್ವವನ್ನು ಕೊಡುವುದು ಧ್ಯಾನಕ್ಕೆ. ಧ್ಯಾನವು ಮನೆಯಾದರೆ, ಮೈಂಡ್ ಫುಲ್ನೆಸ್ ಒಂದು ಪಥವಷ್ಟೆ. ನಲವತ್ತು ವರ್ಷಗಳ ಹಿಂದೆ ಧ್ಯಾನದ ಬಗ್ಗೆ ಮಾತನಾಡುತ್ತಿದ್ದಾಗ, ಜನರು ಧ್ಯಾನವು ಸಮಾಜದಲ್ಲಿ ಜೀವಿಸಬೇಕಾದವರಿಗೆ ಸಲ್ಲದು ಎಂದೇ ಭಾವಿಸುತ್ತಿದ್ದರು.

ಸಮಾಜವನ್ನು ತ್ಯಜಿಸಿ ಹಿಮಾಲಯಕ್ಕೆ ಪಲಾಯನ ಮಾಡುವವರಿಗೆ ಮಾತ್ರ ಧ್ಯಾನ ಎಂದುಕೊಳ್ಳುತ್ತಿದ್ದರು. ಧ್ಯಾನದ ಬಗ್ಗೆ, ಯೋಗದ ಬಗ್ಗೆ ಅನೇಕ ಪೂರ್ವಗ್ರಹಗಳಿದ್ದವು. ಆದರೆ ಇಂದು ಅದೃಷ್ಟಕರವಾಗಿ ಜಗತ್ತು, ಗಮನವನ್ನು ಹೆಚ್ಚಿಸಿಕೊಳ್ಳಲು, ಬುದ್ಧಿಯ ತೀಕ್ಷ್ಣತೆಯನ್ನು ಪಡೆಯಲು, ಒಳ್ಳೆಯ ಆರೋಗ್ಯವನ್ನು, ಉತ್ತಮ ವರ್ತನೆಯನ್ನು ಪಡೆಯಲು ಧ್ಯಾನದ ಮಹತ್ವವನ್ನು ಗುರುತಿಸಿದೆ. ಧ್ಯಾನ ಏನು ಮಾಡುತ್ತದೆ, ಮೈಂಡ್ ಫುಲ್ನೆಸ್ ಏನು ಮಾಡುತ್ತದೆಂದರೆ, ಹಿಂಸಾಮುಕ್ತ ಸಮಾಜವನ್ನು ಸೃಷ್ಟಿಸುತ್ತದೆ. ಶಾಂತಿಯಿಲ್ಲದಿದ್ದರೆ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಹಿಂಸಾಮುಕ್ತ ಸಮಾಜ, ಅನಾರೋಗ್ಯದಿಂದ ಮುಕ್ತವಾದ ದೇಹ, ಒತ್ತಡಮುಕ್ತ ಮನಸ್ಸು, ನಿರೋಧಗಳಿಂದ ಮುಕ್ತವಾದ ಬುದ್ಧಿಯನ್ನು ಧ್ಯಾನವು ಕೊಡುತ್ತದೆ. 

ನಿಮ್ಮ ಕೆಲಸದ ಕ್ಷೇತ್ರದಲ್ಲಿ ಬಹಳ ಪೂರ್ವಗ್ರಹಗಳನ್ನುಳ್ಳ ಸಹೋದ್ಯೋಗಿಗಳಿದ್ದರೆ, ಲಿಂಗದ ಬಗ್ಗೆ, ಧರ್ಮದ ಬಗ್ಗೆ, ವಯಸ್ಸಿನ ಬಗ್ಗೆ ಪೂರ್ವಗ್ರಹಗಳನ್ನು ಹೊಂದಿದ್ದರೆ, ನಿಮಗೆ ಕೆಲಸ ಮಾಡಲಾಗುವುದಿಲ್ಲ. ಅಂತಹವರು ತಂಡವನ್ನೇ ನಾಶ ಮಾಡಿಬಿಡುತ್ತಾರೆ. ಪೂರ್ವಗ್ರಹಗಳನ್ನು ಹೊಂದಿರುವವರು ಫಲದಾಯಕರಾಗಿರುವುದಿಲ್ಲ. ಆದ್ದರಿಂದ ಪೂರ್ವಗ್ರಹಮುಕ್ತ ಬುದ್ಧಿ, ಆಘಾತದ ಸ್ಮರಣೆಯಿಂದ ಮುಕ್ತವಾದ ಸ್ಮೃ ಮತ್ತು ದುಃಖದಿಂದ ವಿಮುಕ್ತವಾದ ಆತ್ಮ, ಇವೆಲ್ಲವನ್ನೂ ಧ್ಯಾನದ ಸರಳವಾದ ಪ್ರಕ್ರಿಯೆಗಳಿಂದ ಪಡೆಯಬಹುದು.

ಇಂದು ಜಗತ್ತಿನ ಎಲ್ಲೆಡೆಯೂ ಧ್ಯಾನವನ್ನು, ಕೆಲಸ ಕ್ಷೇತ್ರದ ಪರಿಸ್ಥಿತಿಯನ್ನು ಸುಧಾರಿಸುವ ಸಲಕರಣೆಯಾಗಿ ಒಪ್ಪಲಾಗಿದೆ. ಕಂಪನಿಗಳಲ್ಲಿ ಹೆಚ್ಚು ಫಲದಾಯಕ ಫಲಿತಾಂಶಗಳನ್ನು ತರಲು ಮತ್ತು ನೌಕರರಲ್ಲಿ ಸ್ವಕೀಯಭಾವನೆ ಯನ್ನು ತರಲು ಧ್ಯಾನವನ್ನು ಒಂದು ಸಲಕರಣೆಯಾಗಿ ಸ್ವೀಕರಿಸಿದ್ದಾರೆ. ಧ್ಯಾನ ಮತ್ತು ಆಹಾರವನ್ನು ಪರಿಚಯಿಸಿದರೆ, ಅಂದಿನ ಕೆಲಸದ ಸಮಸ್ಯೆಗಳು ಅಲ್ಲಿಗೇ ಮುಗಿದು ಹೋಗುತ್ತವೆ. ಊಟದ ವಿರಾಮದ ಸಮಯದಲ್ಲಿ ಎಲ್ಲರೂ ಸೇರಿ ಸಾಮೂಹಿಕ ಧ್ಯಾನ ಮಾಡಿ, ಊಟವನ್ನು ಹಂಚಿಕೊಂಡಾಗ ಅಪಾರವಾದ ಬದಲಾವಣೆ ಉಂಟಾಗುತ್ತದೆ. 

ಮಾನವೀಯ ಸ್ಪರ್ಶ ಇರಬೇಕು. ಕೆಲಸದ ಕ್ಷೇತ್ರದಲ್ಲಿ ಆದರದ ಭಾವವನ್ನು ಬೆಳೆಸಿಕೊಳ್ಳಬೇಕು. ಮನುಷ್ಯರನ್ನು ಯಂತ್ರದಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲ. ನಿನಗೆ ಇಷ್ಟು ಹಣ ಕೊಡುತ್ತೇನೆ, ನೀನು ಇಷ್ಟು ಉತ್ಪಾದನೆಯನ್ನು ಹೊರತರಬೇಕು ಎಂಬ ಧೋರಣೆಯು ಹತ್ತು-ಹದಿನೈದು ವರ್ಷಗಳ ಹಿಂದೆ ನಡೆದಿರಬಹುದು ಅಥವಾ ವಸಾಹತಿನ ಕಾಲದಲ್ಲಿ ನಡೆದಿರಬಹುದು. ಆದರೆ ಅದು ಈಗ ಕೆಲಸ ಮಾಡುವುದಿಲ್ಲ. ಮುಕ್ತವಾದ ಸಮಾಜದಲ್ಲಿ ಮನುಷ್ಯರಿಗೆ ಸ್ಪೂರ್ತಿ, ಹೆಚ್ಚು ಫಲದಾಯಕರಾಗಿರಲು ಮಾನವೀಯ ಸ್ಪರ್ಶ ಬೇಕೇಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net