

ನ್ಯೂಯಾರ್ಕ್: ಖ್ಯಾತ ಉದ್ಯಮಿ ರೂಪರ್ಟ್ ಮುರ್ಡೋಕ್ ಅವರು 92 ನೇ ವಯಸ್ಸಿನಲ್ಲಿ ಐದನೇ ಬಾರಿಗೆ ವಿವಾಹವಾಗಲಿದ್ದಾರೆ. ಈ ಕುರಿತಾಗಿ ಸೋಮವಾರ ತಮ್ಮ ಸ್ವಂತಃ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ರುಪೋರ್ಟ್ ಮುರ್ಡೋಕ್ ಫಾಕ್ಸ್ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್ ಬ್ರಾಡ್‌ಕಾಸ್ಟಿಂಗ್, ಫಾಕ್ಸ್ ಸ್ಪೋರ್ಟ್ಸ್, ಫಾಕ್ಸ್ ಬ್ಯುಸಿನೆಸ್ ಹಾಗೂ ಫಾಕ್ಸ್ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ.
ಮುರ್ಡೋಕ್ ಅವರು ಸ್ಯಾನ್ ಫ್ರಾನ್ಸಿಸ್ಕೋದ ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ.
ಖಾಸಗಿ ವಾಹಿನಿಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರೀತಿಯಲ್ಲಿ ಬೀಳಲು ತುಂಬಾ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯ ಪ್ರೀತಿಯಾಗಿದೆ ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಮುರ್ಡೋಕ್ ಹೇಳಿದ್ದಾರೆ.
14 ವರ್ಷದ ಹಿಂದೆ ಸ್ಮಿತ್ ವಿಧವೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ವೇಳೆ ಸಂಕ್ಷಿಪ್ತ ಸಂವಾದ ನಡೆಸಿದ ಎರಡು ವಾರದ ಬಳಿಕ ಮುರ್ಡೋಕ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಜೋಡಿ ಬೇಸಿಗೆಯಲ್ಲಿ ಮದುವೆಯಾಗಲು ನಿರ್ಧಾರ ಮಾಡಿದೆ.
ಇದನ್ನೂ ಓದಿ: ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!
ಮಾಡಲ್ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್ ಮದುವೆಯಾಗಿ ಆರು ವರ್ಷ ಸಂಸಾರ ನಡೆಸಿ ಕಳೆದ ವರ್ಷ ಡಿವೋರ್ಸ್ ನೀಡಿದ್ದರು. ಹಾಲ್‌ಗೂ ಮುನ್ನ 1999 ರಿಂದ 2013ರವರೆಗೆ ವೆಂಡಿ ಡೆಂಗ್, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್ ಜೊತೆ ಮುರ್ಡೋಕ್ ಜೀವನ ನಡೆಸಿದ್ದರು. ಮುರ್ಡೋಕ್ ಮೊದಲ ಮೂರು ಪತ್ನಿಯರಿಂದ 6 ಮಕ್ಕಳನ್ನು ಪಡೆದಿದ್ದಾರೆ.