ಶಾಸಕರ ಪತ್ರದ ಜಾಡು ಹುಡುಕಿ ಮಾಧ್ಯಮ ಕಚೇರಿಗೆ ಪೊಲೀಸರ ಅಲೆದಾಟ!

Congress (4)
Published on

ಬೆಂಗಳೂರು: ಸರ್ಕಾರದ ವಿರುದ್ಧ ಸಹಿ ಸಂಗ್ರಹ ನಡೆಸಿದ ಆಡಳಿತ ಪಕ್ಷದ ಶಾಸಕರ ಪತ್ರದ ಮೂಲ ಹುಡುಕಾಟ ನಡೆಸಿರುವ ಪೊಲೀಸರು ಇದೀಗ ಮಾಧ್ಯಮ ಪ್ರತಿನಿಧಿಗಳ ಬೆನ್ನು ಬಿದ್ದಿದ್ದಾರೆ.

ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕೆಲವರು 20ಕ್ಕಿಂತ ಹೆಚ್ಚು ಶಾಸಕರ ಸಹಿ ಸಂಗ್ರಹಿಸಿದ್ದರು. ಆ ಪತ್ರದಲ್ಲಿ ಅನುದಾನ ಕೊಡದೇ ಇರುವುದು, ಸಚಿವರ ಅಸಹಕಾರ, ವರ್ಗಾವಣೆ ಮಾಡದ ಕುರಿತು ಅಸಮಾಧಾನ ಹೊರಹಾಕಲಾಗಿತ್ತು. ಆದರೆ ಈ ಪತ್ರ ಅಸಲಿಯಲ್ಲ ನಕಲಿ ಎಂದು ಪತ್ರಕ್ಕೆ ಸಹಿ ಹಾಕಿದವರು ವಾದಿಸಿದ್ದರು.

ಪ್ರಮುಖವಾಗಿ ಆಳಂದ ಶಾಸಕ ಬಿ.ಆರ್.ಪಾಟೀಲ್, ಈ ಪತ್ರದ ನಕಲಿ, ತಮ್ಮ ಲೆಟರ್ ಹೆಡ್ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಪತ್ರದ ಮೂಲ ಹುಡುಕಿಹೊರಟ ಪೊಲೀಸರು, ಆ ಪತ್ರ ಮಾಧ್ಯಮಗಳಿಗೆ ಹೇಗೆ ಸಿಕ್ಕಿತು ಎಂದು ವಿಚಾರಣೆ ನಡೆಸಲಾರಂಭಿಸುತ್ತಿದ್ದಾರೆ.

ನೇರವಾಗಿ ನೋಟಿಸ್ ನೀಡಿ ವಿಚಾರಣೆ ಕರೆಯದೇ ಅನೌಪಚಾರಿಕವಾಗಿ ವಿಚಾರಣೆ ಆರಂಭಿಸಿದ್ದಾರೆ. ಗುರುವಾರ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು ಈ ರೀತಿ ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಪತ್ರ ಬರೆದವರನ್ನು ಹುಡುಕುವ ಬದಲು ಮಾಧ್ಯಮ ಪ್ರತಿನಿಧಿಗಳನ್ನು ವಿಚಾರಣೆಗೊಳಪಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯೆ ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net