ಉದ್ಯಮವನ್ನೂ ಮೀರಿ ಬೆಳೆದಿರುವ ಮಾಧ್ಯಮ: ಅಮಿನ್‌ಮಟ್ಟು

aminmuttu
Published on

ಶಿವಮೊಗ್ಗ: ಪ್ರಜಾಪ್ರಭುತ್ವ ದುರ್ಬಲವಾದಾಗ ಮಾಧ್ಯಮವೂ ದುರ್ಬಲವಾಗುತ್ತದೆ. ಇಂದು ಮಾಧ್ಯಮ ಉದ್ಯಮವನ್ನೂ ಮೀರಿ ಬೆಳೆದಿರುವುದೇ ಹಲವು ವೈರುಧ್ಯಗಳಿಗೆ ಕಾರಣವಾಗಿದೆ ಎಂದು ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.

ಒಡನಾಟ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ: ಮಾಧ್ಯಮ ಮತ್ತು ನಾವು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಉದ್ಯಮದಲ್ಲಾದರೂ ಲಾಭ-ನಷ್ಟದ ಲೆಕ್ಕಾಚಾರವಿರುತ್ತದೆ. ಆದರೆ ಹೆಚ್ಚು ಬೆಲೆಗೆ ಪತ್ರಿಕೆಗಳನ್ನು ಮುದ್ರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಪತ್ರಿಕೆಗಳಲ್ಲಿ ಲಾಭದ ಲೆಕ್ಕಾಚಾರವೂ ಇಲ್ಲ ಎಂಬುದೇ ವಿಶೇಷ ಎಂದರು.

ಓರ್ವ ವ್ಯಕ್ತಿಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರೃ ಮಾಧ್ಯಮಗಳಿಗಿದೆ. ಜನಪ್ರತಿನಿಧಿಗಳಿಗೆ ಇರುವ ಕಾನೂನು ರಕ್ಷಣೆ ಮಾಧ್ಯಮಗಳಿಗಿಲ್ಲ. ಈಗ ಅಭಿವ್ಯಕ್ತಿ ಸ್ವಾತಂತ್ರೃವನ್ನೂ ಮೀರಿ ಕಾರ್ಯನಿರ್ವಹಿಸಿದ ಪರಿಣಾಮ ಮಾಧ್ಯಮ ಸಂಸ್ಥೆಗಳಿಗೆ ಸರಣಿ ರೂಪದಲ್ಲಿ ನೋಟಿಸ್‌ಗಳು ಬರುತ್ತಿವೆ ಎಂದರು ಹೇಳಿದರು.

ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಅನೇಕರು ಹೇಳುವುದುಂಟು. ಆದರೆ ಈ ಸಂಗತಿ ಸಂವಿಧಾನದಲ್ಲಿ ಉಲ್ಲೇಖವೇ ಆಗಿಲ್ಲ. ಭ್ರಷ್ಟತೆ ಎಂಬುದು ಸಮಾಜದ ಎಲ್ಲ ಹಂತಗಳಲ್ಲಿ ಬೇರು ಬಿಟ್ಟಿದೆ. ಅದಕ್ಕೆ ಮಾಧ್ಯಮವೂ ಹೊರತಾಗಿಲ್ಲ. ಎಲ್ಲವೂ ವಿಫಲವಾಗಿರುವಾಗ ಜನರು ಈಗ ಮಾಧ್ಯಮಗಳತ್ತ ನೋಡುತ್ತಿದ್ದಾರಷ್ಟೇ ಎಂದು ಅಭಿಪ್ರಾಯಪಟ್ಟರು. ಬಳಿಕ ನಡೆದ ಸಂವಾದದಲ್ಲಿ ಅಮಿನ್ ಮಟ್ಟು ನೆರೆದಿದ್ದವರ ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net