

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರೈತರಿಗೆ ಮುಂದಿನ ಎರಡು-ಮೂರು ವರ್ಷದಲ್ಲಿ ಖಚಿತವಾಗಿ ದರಖಾಸ್ತು ಪೋಡಿ ಮಾಡಿಕೊಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು. ವಿಕಾಸಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ.2 ರಿಂದಲೇ ದರಖಾಸ್ತು ಪೋಡಿ ಬಾಕಿ ಕೆಲಸ ಅಭಿಯಾನ ಮಾದರಿಯಲ್ಲಿ ಆರಂಭಿಸಲಾಗಿದೆ. ರೈತರ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಮಟ್ಟದಲ್ಲಿ ಕನಿಷ್ಠ 4 ಲಕ್ಷ ರೈತರಿಗೆ ಸಂಬಂಧಿಸಿದ 69,437ಸರ್ವೆ ನಂಬರ್ಗಳಲ್ಲಿ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅರ್ಹರನ್ನು ಗುರುತಿಸಿ ನಂತರ ನಮೂನೆ 6-10 ರ ಪ್ರಕ್ರಿಯೆಗೆ ಸರ್ವೆ ಇಲಾಖೆಗೆ ಪೋಡಿಗೆ ಶಿಫಾರಸು ಮಾಡುತ್ತಾರೆ. ತದನಂತರ ರೈತರಿಗೆ ಪೋಡಿ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಖಾಸಗಿ ಸರ್ವೆ ನಂಬರ್ ಪೋಡಿ: ರಾಜ್ಯಾದ್ಯಂತ 22 ಲಕ್ಷ ಖಾಸಗಿ ಸರ್ವೆ ನಂಬರ್ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದಾರೆ. ನಾವೂ ದರಖಾಸ್ತು ಪೋಡಿ ಕೆಲಸದ ಜತೆಗೆ ಅದನ್ನೂ ಮಾಡಿಕೊಡಲು ತೀರ್ವನಿಸಿದ್ದೇವೆ. ಅದೇ ಕಾರಣಕ್ಕೆ ಹಿಂದೆ ಪೋಡಿಮುಕ್ತ ಅಭಿಯಾನ ಆರಂಭಿಸಲಾಗಿತ್ತು. ಆದರೆ, ನಮ್ಮನ್ನು ಹುಡುಕಿ ಬಂದವರಿಗೆ ಪಹಣಿ ಮಾಡಿಕೊಡ ಲಾಯಿತೇ ವಿನಃ ಎಲ್ಲರಿಗೂ ಮಾಡಿಕೊಡಲಾಗಿಲ್ಲ. ಈ ಬಾರಿ ಒಟ್ಟು ಎಷ್ಟು ಬಾಕಿ ಇದೆ, ಅದನ್ನೆಲ್ಲ ಟಾರ್ಗೆಟ್ ಆಗಿ ತೆಗೆದು ಕೊಂಡು ಎಲ್ಲರಿಗೂ ಕೆಲಸ ಮಾಡಿಕೊಡಲಾಗುವುದು ಎಂದರು.
ರಾಜ್ಯಾದ್ಯಂತ ಶೇ. 81.74 ಆಧಾರ್ ಸೀಡಿಂಗ್: ರಾಜ್ಯಾದ್ಯಂತ ಈವರೆಗೆ ಶೇ. 81.74 ಆಧಾರ್ ಸೀಡಿಂಗ್ ಕೆಲಸ ಪೂರ್ಣಗೊಳಿಸಲಾಗಿದೆ. 4,09,87,831 ಜಮೀನುಗಳ ಆಧಾರ್ ಸೀಡಿಂಗ್ ಮಾಡುವುದು ಇಲಾಖೆಯ ಗುರಿ. ಈವರೆಗೆ 2.15 ಕೋಟಿ ಜಮೀನುಗಳಿಗೆ ಆಧಾರ್ ಅಥೆಂಟಿಫಿಕೇಷನ್ ಕೆಲಸ ಮುಗಿಸಲಾಗಿದೆ. ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ.81.74 ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯಾದ್ಯಂತ 48,16,813 ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. ಆದರೆ, ಅವರ ಹೆಸರಲ್ಲೇ ಪಹಣಿ ಮುಂದುವರಿಯುತ್ತಿದೆ. ಈ ಎಲ್ಲರಿಗೂ ಶೀಘ್ರದಲ್ಲಿ ಪೌತಿ ಖಾತೆ ಆಂದೋಲನದ ಅಡಿಯಲ್ಲಿ ಖಾತೆ ಬದಲಿಸಿಕೊಡಲಾಗುವುದು ಎಂದರು. ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಇದ್ದರು.
ಬಗರ್ ಹುಕುಂ ವಿಲೇ ಪ್ರಕ್ರಿಯೆ ಆರಂಭ: ಬಗರ್ ಹುಕುಂ ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9.80 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅನರ್ಹ ಅರ್ಜಿಗಳೇ ಅಧಿಕ. ಈ ಅರ್ಜಿಗಳ ವಿಲೇವಾರಿಗೆ ಈಗಾಗಲೇ ರಾಜ್ಯಾದ್ಯಂತ 160 ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಎಲ್ಲ ಅರ್ಜಿಗಳನ್ನೂ ವಿಲೇಗೊಳಿಸಬೇಕು. ಅರ್ಹರಿಗೆ ಭೂ ಮಂಜೂರು ಮಾಡಬೇಕು ಎಂದು ತಹಸೀಲ್ದಾರ್ಗೆ ಸೂಚಿಸಲಾಗಿದೆ ಎಂದರು.