

ಸಂಸತ್ತಿನ ಪ್ರಮುಖ ಉದ್ದೇಶವೇ ಶಾಸನ ರಚನೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮತ್ತು ಪರಿಹಾರ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಈ ಮೂಲ ಉದ್ದೇಶಗಳನ್ನೇ ಮರೆತಂತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದ ಬಳಿಕ, 18ನೇ ಲೋಕಸಭೆಯ ಮೊದಲ ಅಧಿವೇಶನ ಕಳೆದ ಜೂನ್-ಜುಲೈ ತಿಂಗಳಲ್ಲಿ ಏಳು ದಿನಗಳ ಕಾಲ ನಡೆಯಿತು. ನೀಟ್ ಪರೀಕ್ಷೆ ವಿವಾದ, ಪ್ರಶ್ನೆಪತ್ರಿಕೆ ಸೋರಿಕೆ, ಅಗ್ನಿವೀರ್ ಕಾರ್ಯಕ್ರಮ ಮುಂತಾದ ವಿಷಯಗಳ ಬಗ್ಗೆ ಭಾರಿ ಗದ್ದಲ ಏರ್ಪಟ್ಟಿತ್ತು. ಅದಕ್ಕೂ ಮೊದಲು, 2023ರ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಮಣಿಪುರದ ಗಲಭೆಯ ವಿಷಯವೇ ಪ್ರಮುಖವಾಗಿತ್ತು. ಕಳೆದ ವರ್ಷದ ಬಜೆಟ್ ಅಧಿವೇಶನದ ಮೊದಲರ್ಧ ಅವಧಿಯಲ್ಲಿ ಯಾವ ವಿಧೇಯಕಗಳೂ ಅಂಗೀಕಾರವಾಗಲಿಲ್ಲ. 133 ಗಂಟೆ ನಡೆಯಬೇಕಿದ್ದ ಲೋಕಸಭೆ ಕಲಾಪ ಕೇವಲ 45 ಗಂಟೆ ನಡೆಯಿತು. 130 ಗಂಟೆ ನಡೆಯಬೇಕಿದ್ದ ರಾಜ್ಯಸಭೆ ಕಲಾಪ 32 ಗಂಟೆ ಮಾತ್ರ ನಡೆಯಿತು. ದ್ವಿತೀಯಾರ್ಧವಂತೂ ಅದಕ್ಕಿಂತ ಕೆಟ್ಟದಾಗಿತ್ತು. ಲೋಕಸಭೆ ಕಲಾಪ 36 ಗಂಟೆಗಳ ಪೈಕಿ ಕೇವಲ 1 ಗಂಟೆ 45 ನಿಮಿಷ ನಡೆದರೆ, ರಾಜ್ಯಸಭೆ ಕಲಾಪ 35 ಗಂಟೆಗಳ ಪೈಕಿ 2 ಗಂಟೆ 78 ನಿಮಿಷ ಮಾತ್ರ ನಡೆಯಿತು. ವಿರೋಧ ಪಕ್ಷಗಳ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಪತ್ರ ಬರೆದು ವಿನಂತಿಸಿದರೂ ಸಂಸತ್ತಿನಲ್ಲಿ ಗದ್ದಲ ನಿಲ್ಲಲಿಲ್ಲ. ಈ ಬಾರಿಯೂ ಇಂತಹುದೇ ದೃಶ್ಯಗಳು ಸಂಸತ್ತಿನಲ್ಲಿ ಕಾಣಿಸತೊಡಗಿವೆ. ಸೋಮವಾರ ಅಧಿವೇಶನ ಆರಂಭವಾಗಿದ್ದು, ಮೊದಲ ದಿನದ ಕಲಾಪವನ್ನು ಉದ್ಯಮಿ ಗೌತಮ್ ಅದಾನಿ ಮೇಲೆ ಬಂದಿರುವ ಲಂಚ ಆರೋಪ ಕುರಿತ ಗದ್ದಲವು ನುಂಗಿ ಹಾಕಿತು. ಮಂಗಳವಾರ ಸಂವಿಧಾನ ದಿನದ ರಜೆ ಬಳಿಕ, ಎರಡನೇ ದಿನವಾದ ಬುಧವಾರ ಕೂಡ ಸಂಸತ್ತಿನಲ್ಲಿ ಅದಾನಿ ವಿಷಯ, ಉತ್ತರಪ್ರದೇಶದ ಸಂಭಾಲ್ ಪ್ರಕರಣ ಮತ್ತಿತರ ವಿಷಯಗಳ ಬಗ್ಗೆಯೇ ಗಲಾಟೆ ನಡೆಯಿತು.
ಲೋಕಸಭೆಯ ನಿವೃತ್ತ ಮಹಾಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು ಹೇಳುವ ಪ್ರಕಾರ, ಸಂಸತ್ತಿನ ಪ್ರತಿ ನಿಮಿಷದ ಕಲಾಪಕ್ಕೆ ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ ಸಂಸದರ ಮತ್ತು ಸಿಬ್ಬಂದಿಯ ಸಂಬಳ, ಭತ್ಯೆಗಳು, ಭದ್ರತೆ, ಕಟ್ಟಡ ನಿರ್ವಹಣೆ, ವಿದ್ಯುತ್, ನೀರು, ಪೆಟ್ರೋಲ್, ಆಹಾರದ ಖರ್ಚು ಸೇರಿದೆ. 2-3 ವರ್ಷಗಳ ಹಿಂದೆ ಲೆಕ್ಕ ಹಾಕಿದ್ದರ ಪ್ರಕಾರ, ಒಟ್ಟಾರೆ ಒಂದು ಅಧಿವೇಶನಕ್ಕೆ ಸುಮಾರು 133 ಕೋಟಿ ರೂ. ಖರ್ಚಾಗುತ್ತದೆ. ಇಷ್ಟೆಲ್ಲ ವೆಚ್ಚ ಮಾಡಿ, ಜನರ ಸಮಸ್ಯೆಗಳನ್ನೇ ರ್ಚಚಿಸದಿದ್ದರೆ ಏನು ಪ್ರಯೋಜನ? ವಿಧೇಯಕಗಳ ಬಗ್ಗೆ ಸಮಾಲೋಚಿಸದೆ ತರಾತುರಿಯಲ್ಲಿ ಅಂಗೀಕರಿಸಿದರೆ ಅದರಿಂದ ಯಾರಿಗೆ ಲಾಭ? ಗದ್ದಲವೇ ಪ್ರಮುಖವಾಗಿಬಿಟ್ಟರೆ ನಿಜವಾಗಿಯೂ ಕೇಳಬೇಕಾದ ಪ್ರಶ್ನೆಗಳನ್ನೇ ಕೇಳಲು ಅವಕಾಶ ಸಿಗುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಸರ್ಕಾರ ಕೂಡ ವಿರೋಧ ಪಕ್ಷಗಳು ಒತ್ತಾಯಿಸುವ ವಿಷಯಗಳ ಚರ್ಚೆಗೆ ಒಂದಲ್ಲ ಒಂದು ನಿಯಮದಡಿ ಅವಕಾಶ ಮಾಡಿಕೊಡಬೇಕಾಗುತ್ತದೆ. ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ.