ಅರ್ಥೈಸು ಎಲ್ಲರನು ನಿನ್ನಂತ್ಯಕಾಲದಲಿ…

home
Published on
 ಅದೊಂದು ಹಳೆಯ ಕಾಲದ ಹಳ್ಳಿಯ ದೊಡ್ಡ ಮನೆ. ನೂರಾರು ವರ್ಷಗಳಿಂದ ಹಲವಾರು ಮಕ್ಕಳು ಮೊಮ್ಮಕ್ಕಳು ಬೆಳೆದು ಬಾಳಿ ಬದುಕಿದ ಮನೆ. ಪ್ರತಿ ವರ್ಷ ಅದೆಷ್ಟೋ ಸಡಗರ ಸಂಭ್ರಮದ ಹಬ್ಬ ಹುಣ್ಣಿಮೆಗಳ ಶುಭ ಸಮಾರಂಭಗಳ ಆಚರಣೆಯನ್ನು ಕಂಡ ಮನೆ. ಈಗ ಆಟವಾಡುವ ಮಕ್ಕಳಿಲ್ಲ; ಓಡಾಡುವ ಮನೆ ಮಂದಿ ಇಲ್ಲ. ಪಟ್ಟಣದ ಪೊಟ್ಟಣಕೆ ವಲಸೆ ಹೋದರು ಯುವಕರೆಲ್ಲರೂ ಮುದುಕರನ್ನು ಅಲ್ಲೇ ಬಿಟ್ಟು. ಹೊಸ ಜನರು ಬರುತ್ತಿಲ್ಲ; ಹಳೆಯವರಾರೂ ಉಳಿದಿಲ್ಲ. ಧೂಳು ತುಂಬಿದ ಕೋಣೆಯಲ್ಲಿ ದೇವನೊಬ್ಬನೆ ಪೂಜೆ ಪುನಸ್ಕಾರಗಳಿಲ್ಲದೆ ಧ್ಯಾನಸ್ಥನಾಗಿಹನು.

ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣವಿಲ್ಲದೆ ವರುಷಗಳೇ ಆಗಿಹುದು. ಅಂಗಳದ ತುದಿಯಲ್ಲಿ ನೆಟ್ಟಿರುವ ತುಳಸಿ ಗಿಡ ನೋಡುತ್ತಿದೆ ಮನೆಯನ್ನು ನಿಟ್ಟುಸಿರು ಬಿಟ್ಟು. ಬೇಲಿಯನ್ನು ಬಳಸಿ ನಿತ್ಯವೂ ಅರಳುತ್ತಿದೆ ಹೂಬಳ್ಳಿ, ಮಾಲೆಯಾಗುವ ಆಸೆಯನ್ನು ಹೊತ್ತು. ಆದರೆ ಕೇಳುವವರಿಲ್ಲದೆ ಉದುರಿ ಹೋಗಿವೆ ಅವುಗಳು ಅಲ್ಲೇ ಬಿದ್ದು. ಮಳೆಗಾಲ ಬಂದರೆ ಮಾಡು ಸೋರುವುದು; ಮನೆಯಲ್ಲಿ ಉಳಿದಿಲ್ಲ ಮುದ್ದು ಬೆಕ್ಕು ಕೂಡಾ. ಈಗ ಉಳಿದಿರುವುದು, ಕೊನೆಯ ಯಜಮಾನನ ಹೆಣ ಒಂದೇ. ದಕ್ಷಿಣಕ್ಕೆ ಮುಖ ಮಾಡಿ ಪಡಸಾಲೆಯಲ್ಲಿ ಮಲಗಿಸಿದ್ದರು ಬಿಳಿಯ ವಸ್ತ್ರವ ಹೊದಿಸಿ. ತಲೆಯ ಬಳಿ ಉರಿಯುತ್ತಿದ್ದ ದೀಪ, ಮನೆ ಮುಂದೆ ಜ್ವಲಿಸುತಿಹ ಕೊಳ್ಳಿ ಈ ಸಾವನ್ನು ಸಾರುವ ಸಾಕ್ಷಿಗಳಾಗಿದ್ದವು. ಸೆರಗಿನಂಚಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದ ಮಡದಿ ಕುಳಿತಿದ್ದಳು ಮನೆಯ ಮೂಲೆಯಲ್ಲಿ. ಮುದಿ ಅತ್ತೆ ಜಪಮಾಲೆಯನ್ನು ಹಿಡಿದು ಅಳುತ್ತಿದ್ದರು ಯಾರಿಗೂ ಕೇಳದಂತೆ. ಬದುಕಿದ್ದಾಗ ಹೇಗಿರುವೆ? ಎಂದು ಕೇಳದವರು ಸತ್ತ ಮೇಲೆ ಹೇಗೆ ಸತ್ತ? ಎಂದು ಕೇಳುತ್ತಾ ಮನೆಯ ಸುತ್ತ ಜನ ಸೇರಿರುವರು. ನಾವು ಹುಟ್ಟುವಾಗ ಎಷ್ಟು ಜನರು ಬಂದರು ಅನ್ನುವುದಕ್ಕಿಂತಲೂ ನಾವು ಸತ್ತಾಗ ಎಷ್ಟು ಜನರು ಬಂದರು ಅನ್ನುವುದರಿಂದ ನಮ್ಮ ಜನಪ್ರಿಯತೆ ವ್ಯಕ್ತವಾಗುತ್ತದೆ ಅಲ್ಲವೇ? ಹೆಣ ಸುಡಲು ಆಗುತ್ತಿಲ್ಲ! ಕಾರಣ ವಿದೇಶದಲ್ಲಿರುವ ಮಗನ ಆಗಮನ ಇನ್ನು ಆಗಿರಲಿಲ್ಲ!

ಅಷ್ಟರಲ್ಲಿ ಓರ್ವ ಸಾಧು ಅಲ್ಲಿಗೆ ಬಂದರು. ತನ್ನ ಕಮಂಡಲದೊಳಗೆ ವಿಶೇಷ ಜಲವನ್ನು ತುಂಬಿಕೊಂಡು ಅವರು ಹೇಳಿದರು- ಈ ನೀರನ್ನು ಕುಡಿಸಿದರೆ ಈತ ಮತ್ತೆ ಬದುಕುತ್ತಾನೆ. ಅಷ್ಟೇ ತಾನೇ ಕೊಡಿ ನಾನೇ ಕುಡಿಸುತ್ತೇನೆ ಎಂದು ಮಡದಿ ಹೇಳಲು, ಸಾಧು ಹೇಳಿದರು: ಆದರೆ ಇದನ್ನು ಹೆಣದ ಬಾಯಿಗೆ ಬಿಡುವ ಮುನ್ನ ಇನ್ಯಾರಾದರೂ ಮೊದಲು ಕುಡಿಯಬೇಕು. ಮೊದಲು ಅವರು ಸತ್ತುಹೋಗಿ ಈತನ ಪ್ರಾಣವನ್ನು ಉಳಿಸುತ್ತಾರೆ. ಒಂದು ಪ್ರಾಣ ತೆಗೆದ ಮೇಲೆ ಮಾತ್ರ ಇನ್ನೊಂದು ಪ್ರಾಣವನ್ನು ಉಳಿಸುವ ಶಕ್ತಿ ಈ ವಿಶೇಷ ಜಲದ್ದು. ನೀವೇ ಕುಡಿದು ನಿಮ್ಮ ಗಂಡನ ಪ್ರಾಣವನ್ನು ಉಳಿಸಿ ಬಿಡಿ ತಾಯಿ. ಇದನ್ನು ಕೇಳಿ ಬೆಚ್ಚಿಬಿದ್ದ ಮಡದಿ ಹೇಳಿದಳು- ಅಯ್ಯೋ ನಾನು ಹೇಗೆ ಕುಡಿಯಲಿ? ನಾನು ಸತ್ತು ಹೋದರೆ ನನ್ನ ಮಕ್ಕಳನ್ನು, ನನ್ನ ಮುದಿ ಅತ್ತೆಯನ್ನು ನೋಡಿಕೊಳ್ಳುವವರು ಯಾರು? ನಾನು ಸಾಯಲಾರೆ. ಉತ್ತರವಾಗಿ ಸಾಧು ಹೇಳಿದರು: ಬದುಕಿ ಉಳಿಯುವ ನಿಮ್ಮ ಗಂಡ ಇರುವರಲ್ಲ. ಪ್ರತಿಯಾಗಿ ಆಕೆ ಹೇಳಿದಳು -ಅವರು ಬದುಕಿ ಉಳಿದರೆ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾರೆ. ಆಗ ನನ್ನ ಮಕ್ಕಳು ಅನಾಥರಾಗುತ್ತಾರೆ. ನನ್ನ ಬದಲಿಗೆ ಈ ಜಲವನ್ನು ನನ್ನ ಅತ್ತೆಗೆ ಕೊಡಿ. ಇಷ್ಟು ವರ್ಷ ಬದುಕಿದ ಮೇಲೆ ಅವರು ಇನ್ನು ಬದುಕಿಯಾದರೂ ಮಾಡುವುದೇನಿದೆ? ಈ ಮಾತನ್ನು ಕೇಳಿಸಿಕೊಂಡ ಅತ್ತೆ ಹೇಳಿದಳು- ಅಯ್ಯೋ ನಾನು ಸತ್ತರೆ ಮೊಮ್ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ?! ಅಂತೂ ಯಾರೂ ಕುಡಿಯಲು ತಯಾರಿಲ್ಲದ ಜಲವನ್ನು ಹಿಡಿದುಕೊಂಡು ಆ ಸಾಧು ಮನೆ ಬಿಟ್ಟು ತೆರಳಿದರು. ತೆರಳುವ ಮುನ್ನ ಮಾತೊಂದನ್ನು ಹೇಳಿದರು: ಇದುವೇ ನಿಜವಾದ ಸತ್ಯ. ನಮಗೆ ಪರಿಚಯವಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಮಗೆ ಪರಿಚಯವಿಲ್ಲದ ವ್ಯಕ್ತಿ ಒಬ್ಬನಿರುತ್ತಾನೆ. ಅವನ ಪರಿಚಯವಾಗುವುದು ನಮ್ಮ ಅಂತ್ಯಕಾಲದಲ್ಲಿಯೇ.ಹೌದು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಗಂಡನನ್ನೇ ಪ್ರೀತಿಸುವ ಹೆಂಡತಿಯರು ಕಾಣಸಿಗುವುದು ಚರಿತ್ರೆಯಲ್ಲಿ ಮಾತ್ರ.

ವಾಸ್ತವದಲ್ಲಿ ನಮ್ಮನ್ನು ಪ್ರೀತಿಸಿದಷ್ಟು ನಾವು ಇನ್ನೊಬ್ಬರನ್ನು ಪ್ರೀತಿಸಲಾರೆವು. ಅಂತೆಯೇ ನಮ್ಮ ಮಕ್ಕಳು ನಮ್ಮಿಂದಾಗಿಯೇ ಹುಟ್ಟಿದರು ವಿನಹ ನಮಗಾಗಿಯೇ ಹುಟ್ಟಿಲ್ಲವೆಂಬ ಕಟುಸತ್ಯದ ಅರಿವಾಗುವುದು ನಮ್ಮ ಅಂತ್ಯಕಾಲದಲ್ಲಿಯೇ! ಒಟ್ಟಿನಲ್ಲಿ ಅರ್ಥೈಸು ಬಂಧುಗಳನು ನಷ್ಟದಲಿ, ಅರ್ಥೈಸು ಮಿತ್ರರನು ಕಷ್ಟದಲಿ, ಅರ್ಥೈಸು ಮಕ್ಕಳನು ವೃದ್ಧಾಪ್ಯದಲಿ, ಅರ್ಥೈಸು ಮಡದಿಯನು ನಿನ್ನಂತ್ಯ ಕಾಲದಲಿ: ಅರ್ಥೈಸು ನಿನ್ನ ನೀ ಏಕಾಂತದಲಿ ಎಂಬುದು ಅನುಭವದ ಕಿವಿ ಮಾತು.

(ಪ್ರತಿಕ್ರಿಯಿಸಿ:drputhuraya@yahoo.co.in)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net