

MEA Press Conference: ಪಾಕಿಸ್ತಾನದಲ್ಲಿ ನಡೆದ ದಾಳಿಗಳ ಕುರಿತು ಬೆಳಗ್ಗೆ 10:30ಕ್ಕೆ ಸುದ್ದಿಗೋಷ್ಠಿ ನಡೆಸಿದ ಭಾರತೀಯ ಸೇನೆ, ಪ್ರಸ್ತುತ ದೇಶದಲ್ಲಿ ಏನೆಲ್ಲ ಆಗಿವೆ. ಪಾಕ್ ಯಾವುದನ್ನು ಗುರಿಯಾಗಿಸಿ, ಎಲ್ಲೆಲ್ಲಿ ದಾಳಿ ಮಾಡಿತು ಎಂಬ ಮಾಹಿತಿಯನ್ನು ವಿವರವಾಗಿ ತಿಳಿಸಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪರಿಸ್ಥಿತಿ ವಿವರಿಸಿದ ಕರ್ನಲ್ ಸೋಫಿಯಾ, "ಪಾಕಿಸ್ತಾನಿ ಸೇನೆಯು ಪಶ್ಚಿಮ ಗಡಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಅದು ಭಾರತದ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು ಮತ್ತು ಫೈಟರ್ ಜೆಟ್‌ಗಳನ್ನು ಬಳಸಿ ದಾಳಿ ನಡೆಸಿದೆ. ಎದುರಾಗುತ್ತಿದ್ದ ಭಾರೀ ಅಪಾಯಗಳನ್ನು ಭಾರತೀಯ ಸೇನೆ ತಟಸ್ಥಗೊಳಿಸಿದೆ. ಆದರೆ, ಪಾಕಿಸ್ತಾನ 26ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಯುದಳದ ಮೂಲಕ ನುಸುಳಲು ಪ್ರಯತ್ನಿಸಿದೆ" ಎಂದರು.
"ಪಾಕ್ ಉಧಮ್‌ಪುರ, ಭುಜ್, ಪಠಾಣ್‌ಕೋಟ್, ಬಟಿಂಡಾದಲ್ಲಿನ ವಾಯುಪಡೆಯ ನೆಲೆಗಳಲ್ಲಿ ನಮ್ಮ ಉಪಕರಣಗಳು ಮತ್ತು ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ. ಅವರು ಪಂಜಾಬ್‌ನ ವಾಯುನೆಲೆಯನ್ನು ಗುರಿಯಾಗಿಸಲು ಬೆಳಗಿನ ಜಾವ 1:40ರ ಸುಮಾರಿಗೆ ಅತಿ ವೇಗದ ಕ್ಷಿಪಣಿಗಳನ್ನು ಬಳಸಿದ್ದಾರೆ. ಅವರು ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳ ಮೇಲೆಯೂ ದಾಳಿ ಮಾಡಿದ್ದಾರೆ" ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು,(ಏಜೆನ್ಸೀಸ್).