

ಮಂಗಳೂರು: ಅಕ್ರಮವಾಗಿ 3.90 ಲಕ್ಷ ರೂ. ಮೌಲ್ಯದ 65 ಗ್ರಾಂ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಸಾಗಾಟ ಮಾಡುತ್ತಿದ್ದಾಗ ಕೊಣಾಜೆ ಪೊಲೀಸರು ಮಂಜನಾಡಿ ನಾಟೆಕಲ್ ವಿಜಯನಗರ ಎಂಬಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು, ಇಬ್ಬರು ಕೇರಳದ ಮೂಲದ ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿಗಳಾದ ಶಫೀಕ್ ಮತ್ತು ಅಲ್ತಾಫ್ ಬಂಧಿತ ಆರೋಪಿಗಳು. ಸಾಗಾಟಕ್ಕೆ ಉಪಯೋಗಿಸಿದ ಸುಮಾರು 5 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, 11 ಸಾವಿರ ರೂ. ಮೌಲ್ಯದ 4 ಮೊಬೈಲ್ ಸೇರಿದಂತೆ 9.01 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿಂದ ಎಂಡಿಎಂಎ ಡ್ರಗ್ಸ್ ಖರೀದಿಸಿ ಮಂಗಳೂರು ಹಾಗೂ ಕಾಸರಗೋಡಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡಲು ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸಿಪಿ ಹರಿರಾಂ ಶಂಕರ್ ನಿರ್ದೇಶನದಂತೆ ಎಸಿಪಿ ರಂಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಸಂಚಾರ ವಿಭಾಗದ ಎಸಿಪಿ ನಟರಾಜ್, ಕೊಣಾಜೆ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ, ಶರಣಪ್ಪ ಭಂಡಾರಿ, ಎಎಸ್ ಮೋಹನ್, ಸಿಬ್ಬಂದಿ ನಾಗರಾಜ ಲಮಾಣಿ, ಅಶೋಕ್, ಪುರುಷೋತ್ತಮ, ಮಂಜುನಾಥ್, ಶಿವಕುಮಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.