

ನ್ಯೂಯಾರ್ಕ್: ಅಮೆರಿಕನ್ ಫಾಸ್ಟ್ ಫುಡ್ ಮೆಕ್ಡೊನಾಲ್ಡ್ಸ್ ರಷ್ಯಾದ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದ್ದು, ದೇಶದಲ್ಲಿ ತನ್ನ ವ್ಯವಹಾರವನ್ನು ಸ್ಥಳೀಯ ಖರೀದಿದಾರರಿಗೆ ಮಾರಾಟ ಮಾಡುತ್ತದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಯೂಕ್ರೇನ್-ರಷ್ಯಾ ಯುದ್ಧ ಬಿಕ್ಕಟ್ಟು ಇದೀಗ ದೈತ್ಯ ಕಂಪನಿ ಮೇಲೂ ಪರಿಣಾಮ ಬೀರಿದ್ದು, ರಷ್ಯಾದಿಂದ ಈಗಾಗಲೇ ಹಲವು ಉದ್ಯಮಗಳು ಕಾಲ್ಕಿತ್ತಿವೆ.
ನೆಟ್ಫ್ಲಿಕ್ಸ್ ಹಾಗೂ ಲೆವಿ ಹೊರಬಂದಿದ್ದು, ಇದೀಗ ಮ್ಯಾಕ್ಡೊನಾಲ್ಡ್ಸ್ ಕೂಡ ಮಾರುಕಟ್ಟೆಯಿಂದ ನಿರ್ಗಮಿಸಲು ನಿರ್ಧಾರ ಮಾಡಿದೆ. ಇದೇ ಸಾಲಿನಲ್ಲಿ ಕೆಎಫ್ಸಿ ಮತ್ತು ಪಿಜಾ ಹಟ್ ಕೂಡ ಇನ್ನು ಹೊಸ ಹೂಡಿಕೆ ಮಾಡುವುದಿಲ್ಲ ಎಂದು ಹೇಳಿದೆ.
ಪ್ರಸ್ತುತ 1000 ಕೆಎಫ್ಸಿ ಮಳಿಗೆ ಹಾಗೂ 50ಕ್ಕೂ ಹೆಚ್ಚು ಪಿಜಾ ಹಟ್ ರೆಸ್ಟೋರೆಂಟ್ಗಳಿದ್ದು, ಇದರ ಲಾಭವನ್ನು ಮಾನವೀಯ ದೃಷ್ಟಿಯಿಂದ ರೆಡ್ ಕ್ರಾಸ್ ಸಂಸ್ಥೆಗೆ ದಾನ ಮಾಡುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇನ್ನು ರಷ್ಯಾದಲ್ಲಿ ಮ್ಯಾಕ್ಡೊನಾಲ್ಡ್ಸ್ 850 ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವ 62 ಸಾವಿರ ಕೆಲಸಗಾರರ ಬಗ್ಗೆ ಸದ್ಯಕ್ಕೆ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 30 ವರ್ಷಗಳಿಂದ ರಷ್ಯಾ ಮಾರುಕಟ್ಟೆಯಲ್ಲಿ ಮ್ಯಾಕ್ಡೊನಾಲ್ಡ್ಸ್ ಕಾರ್ಯನಿರ್ವಹಿಸುತ್ತಿದೆ. (ಏಜೆನ್ಸೀಸ್)