ಜೂಲನ್‌ಗೆ ವಿಶೇಷ ಗೌರವ ನೀಡಿದ ಎಂಸಿಸಿ

julan
Published on

ಲಂಡನ್: ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ (ಡಬ್ಲ್ಯುಸಿಸಿ) ಸೋಮವಾರ ಮೂವರು ಸದಸ್ಯರನ್ನು ನೇಮಕ ಮಾಡಿಕೊಂಡಿದ್ದು, ಭಾರತ ಮಹಿಳಾ ಕ್ರಿಕೆಟ್‌ನ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಸಮಿತಿಯಲ್ಲಿ ಸ್ಥಾನ ಪಡೆದ ಎರಡನೇ ಭಾರತೀಯರೆನಿಸಿದ್ದಾರೆ. ಇಂಗ್ಲೆಂಡ್‌ನ ಹೀದರ್ ನೈಟ್, ಮಾಜಿ ನಾಯಕ ಇವೋಯಿನ್ ಮಾರ್ಗನ್ ಸಮಿತಿಗೆ ಆಯ್ಕೆಯಾಗಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ ಎಂದು ಕ್ಲಬ್ ತಿಳಿಸಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಈ ಸಮಿತಿಯಲ್ಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ.

ಪ್ರಸ್ತುತ ಸಮಿತಿಯು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರು, ಅಂಪೈರ್ ಮತ್ತು ವಿಶ್ವದಾದ್ಯಂತದ ಅಧಿಕಾರಿಗಳನ್ನು ಒಳಗೊಂಡಿರುವ ಸ್ವತಂತ್ರ ಸಂಸ್ಥೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಎಂಸಿಸಿಯ ಅಜೀವ ಸದಸ್ಯೆಯಾಗಿ ನೇಮಕಗೊಂಡಿದ್ದ ಜೂಲನ್, ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಜೂಲನ್, ಹೀದರ್ ಮತ್ತು ಇವೋಯಿನ್ ಅವರನ್ನು ವಿಶ್ವ ಕ್ರಿಕೆಟ್ ಸಮಿತಿಗೆ ಸ್ವಾಗತಿಸಲು ರೋಮಾಂಚನ ಗೊಂಡಿದ್ದೇವೆ ಎಂದು ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಮೈಕ್ ಗ್ಯಾಟಿಂಗ್ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಆದ್ದರಿಂದ ಸಮಿತಿಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಾಗುತ್ತಿದೆ. ಜೂಲನ್, ಹೀದರ್ ನೈಟ್ ಜತಗೆ ಕ್ಲೇರ್ ಕಾನರ್ ಮತ್ತು ಸುಜೀ ಬೇಟ್ಸ್ ಸಮಿತಿಯಲ್ಲಿರುವ ಇತರ ಮಹಿಳಾ ಕ್ರಿಕೆಟಿರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net