ಮಾಯೆಯ ಬಂಧನ!

Untitled design (1)
Published on

ಇನ್ನೇನು ಆಕೆ (ಹಿಂದಿನ ಪುರಂಜನ) ಚಿತೆಯನ್ನು ಪ್ರವೇಶಿಸುತ್ತಾಳೆ ಎಂಬಷ್ಟರಲ್ಲಿ, ಅವಳಿಗೆ ಹಿಂದಿನಿಂದ ಒಂದು ಮಧುರವಾದ ಧ್ವನಿ ಕೇಳಿಸಿತು. ಅಲ್ಲಿ ಒಬ್ಬ ಬ್ರಾಹ್ಮಣ ನಿಂತಿದ್ದನು. ಅವನು ‘ಓ ಸ್ನೇಹಿತ! ನಿನ್ನ ಹೆಸರಿಲ್ಲದ ಸ್ನೇಹಿತ, ನಿನಗೆ ನನ್ನ ನೆನಪಿದೆಯೇ? ನೀನು ಮತ್ತು ನಾನು ಹಂಸಗಳಾಗಿದ್ದೆವು. ನಿರಾಶ್ರಿತರಾಗಿದ್ದೆವು. ಮಾನಸ ಸರೋವರದಲ್ಲಿ ಹಲವಾರು ಸಾವಿರ ವರ್ಷಗಳ ಕಾಲ ನೀರಿನಲ್ಲಿಯೇ ನಾವು ವಾಸಿಸುತ್ತಿದ್ದೆವು! ಅಲ್ಲೆ ಅತ್ಯಂತ ಸಂತಸದಿಂದ ಬದುಕು ಸಾಗಿಸುತ್ತಿದ್ದೆವು. ಆದರೆ ಅಯ್ಯೋ, ನನ್ನನ್ನು ತ್ಯಜಿಸಿ, ನೀನು ಇಂದ್ರಿಯ ಸುಖಗಳನ್ನು ಹುಡುಕುತ್ತಾ ಹೋದೆ, ಇಲ್ಲಿ ಮತ್ತು ಅಲ್ಲಿ ಅಲೆದಾಡಿದ ನಂತರ, ಒಬ್ಬ ಮಹಿಳೆ ನಿರ್ವಿುಸಿದ ಒಂಬತ್ತು ದ್ವಾರಗಳ ನಗರವನ್ನು ಪ್ರವೇಶಿಸಿದೆ, ಅವಳು ನೀಡಿದ ಸುಖಗಳಲ್ಲಿ ಮಗ್ನನಾಗಿ, ನೀನು ವಾಸ್ತವದ ಬಗ್ಗೆ ಎಲ್ಲವನ್ನೂ ಮರೆತು ಈ ದುಃಖಕರ ಸ್ಥಿತಿಗೆ ಇಳಿದಿದ್ದೀಯೆ.

ನೀನು ವಿದರ್ಭದ ರಾಜನ ಮಗಳಲ್ಲ, ಈ ರಾಜ ನಿನ್ನ ಪತಿಯೂ ಅಲ್ಲ, ಅಥವಾ ಒಂಬತ್ತು ದ್ವಾರಗಳ ನಗರಕ್ಕೆ ನಿಮ್ಮನ್ನು ಬಂಧಿಸಿದ ಆ ಮಹಿಳೆಯ ಪತಿಯೂ ಅಲ್ಲ. ನಿನ್ನ ಹಿಂದಿನ ಜನ್ಮದಲ್ಲಿ ನೀನು ನಿನ್ನನ್ನು ಪುರುಷನೆಂದು ಭಾವಿಸಿದ್ದೆ ಮತ್ತು ಈ ಜನ್ಮದಲ್ಲಿ ನೀನು ನಿನ್ನನ್ನು ಮಹಿಳೆ ಎಂದು ಪರಿಗಣಿಸುತ್ತೀಯ. ಇದೆಲ್ಲವೂ ಮಾಯೆಯಿಂದಾಗಿ. ಈ ಎರಡೂ ವಿಷಯಗಳು ಸುಳ್ಳು. ನಾವಿಬ್ಬರೂ ಆತ್ಮ ತತ್ತ್ವವನ್ನೇ ಹೊಂದಿದ್ದೇವೆ. ಇದು ನಮ್ಮ ನಿಜವಾದ ಸ್ವಭಾವ ಎಂದು ತಿಳಿ. ನಾನು ನೀನೇ ಮತ್ತು ನೀನು ನಾನೇ ಹೊರತು ಬೇರೆ ಯಾರೂ ಅಲ್ಲ. ನಿಜವಾದ ತಿಳುವಳಿಕೆಯುಳ್ಳ ಪುರುಷರು ನಮ್ಮ ನಡುವೆ ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ.’ ಬ್ರಾಹ್ಮಣನ ಈ ಮಾತುಗಳನ್ನು ಕೇಳಿ, ವಿದರ್ಭ ರಾಜನ ಮಗಳು ಸಂಪೂರ್ಣ ಶಾಂತಿಯನ್ನು ಪಡೆದಳು. ಆ ಬ್ರಾಹ್ಮಣ ರೂಪದಲ್ಲಿದ್ದ ಪುರಂಜನನ ಹಳೆಯ ಸ್ನೇಹಿತ ಹೇಳಿದ ಆ ಮಾತುಗಳೆಲ್ಲ ಅತ್ಯಂತ ಅರ್ಥಪೂರ್ಣವಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net