

ಮಾಯಕೊಂಡ: ಮಾಯಕೊಂಡ ಹೋಬಳಿಯ ಅನೇಕ ಗ್ರಾಮಗಳಲ್ಲಿ ಶನಿವಾರ, ಭಾನುವಾರ ಮಳೆ ಬಿರುಸಾಗಿ ಸುರಿಯಿತು.
ಶನಿವಾರ ಮಧ್ಯಾಹ್ನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ, ಎಚ್. ಬಸವಪುರ, ಕ್ಯಾತನಹಳ್ಳಿ, ಹಿಂಡಿಸಕಟ್ಟೆ, ನಲ್ಕುಂದ, ಒಂಟಿಹಾಳು, ವಿಠ್ಠಲಾಪುರ, ಎಚ್. ರಾಂಪುರ, ಹುಚ್ಚವ್ವನಹಳ್ಳಿ ವಡ್ಡರಹಟ್ಟಿ ಮತ್ತಿತರ ಗ್ರಾಮಗಳಲ್ಲಿ ಬಿರುಮಳೆ ಸುರಿಯಿತು.
ಭಾನುವಾರ ಮಧ್ಯಾಹ್ನವೂ ಮಾಯಕೊಂಡ, ಆನಗೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ಮಳೆ ಸುರಿದಿದ್ದರಿಂದ ಅಡಕೆ ತೋಟಗಳಲ್ಲಿ ಸಾಕಷ್ಟು ಮಳೆ ನೀರು ಹರಿಯಿತು.
ಹುಚ್ಚವ್ವನಹಳ್ಳಿ ಕೆರೆ ಭರ್ತಿ: ಹೋಬಳಿಯ ಹುಚ್ಚವನಹಳ್ಳಿ ಕೆರೆ 200 ಎಕರೆಗಿಂತ ಹೆಚ್ಚು ವಿಸ್ತೀರ್ಣವುಳ್ಳ ದೊಡ್ಡ ಕೆರೆ ಅಂದಾಜು 1500 ಎಕರೆ ನೀರಾವರಿ ಅಚ್ಚುಕಟ್ಟು ಹೊಂದಿದೆ. ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಭಾಗಶಃ ಭರ್ತಿಯಾಗಿದೆ. ಒಂದೂವರೆಯಿಂದ ಎರಡಡಿ ಮಾತ್ರ ತುಂಬುವುದು ಬಾಕಿ ಇದ್ದು, ಇನ್ನೂ ಒಂದು ಗಂಟೆ ಬಿರುಮಳೆ ಸುರಿದರೆ ಕೋಡಿಬಿದ್ದು ನೀರು ಹೊರಗೆ ಹರಿಯುತ್ತದೆ ಎನ್ನುತ್ತಾರೆ ಈ ಭಾಗದ ಗ್ರಾಮಗಳ ರೈತರು.
ಹುಚ್ಚವ್ವನಹಳ್ಳಿ ಕೆರೆ ಪಕ್ಕದ ಗುಡ್ಡದ ಸಾಲಿನಲ್ಲಿರುವ ನೀರಿನ ಒಳಹರಿವಿನ ಹಳ್ಳಗಳು ಹೂಳು ತುಂಬಿ ಹಾಳಾಗಿದ್ದು, ಸಣ್ಣ ನೀರಾವರಿ ಇಲಾಖೆಯ ಮೂಲಕ ತಕ್ಷಣ ಹಣ ಬಿಡುಗಡೆ ಮಾಡಿ ಹಳ್ಳಗಳ ಅಭಿವೃದ್ಧಿ ಮತ್ತು ಕೆರೆಗೆ ಹೋಗುವ ರಸ್ತೆ ಅಭಿವೃದ್ಧಿ ಮಾಡಲು ಮುಂದಾಗಬೇಕು ಎನ್ನುತ್ತಾರೆ ಹುಚ್ಚವ್ವನಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಸಿ. ಗಣೇಶ್.
ರೈತರ ಮೊಗದಲ್ಲಿ ಹರ್ಷ: ಕಳೆದೆರಡು ದಿನಗಳಿಂದ ಸುರಿದ ಬಿರುಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ. ಆನಗೋಡು, ಮಾಯಕೊಂಡ ಹೋಬಳಿಯ ನೂರಾರು ಗ್ರಾಮಗಳಲ್ಲಿ ಅಡಕೆ ಬೆಳೆಗೆ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಹಾಗೂ ಕೊಳವೆಬಾವಿಗಳ ಅಂತರ್ಜಲ ಅಭಿವೃದ್ಧಿಗೆ ಕೆರೆಗಳು ಭರ್ತಿಯಾಗುವುದು ಅತ್ಯವಶ್ಯಕ. ಬಿರುಮಳೆ ಸುರಿದಿದ್ದರಿಂದ ರೈತರಲ್ಲಿ ಹರ್ಷ ಹಾಗೂ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದೆರಡು ದಿನಗಳಿಂದ ಸುರಿದ ಬಿರುಮಳೆಗೆ ಬೆಳೆ ಹಾನಿ ಸಂಭವಿಸಿಲ್ಲ. ಅಡಕೆ ತೋಟಗಳಲ್ಲಿ ನೀರು ಹರಿದಾಡಿದೆ. ಅದು ಬಿಟ್ಟರೆ ಹಳ್ಳದ ಅಕ್ಕಪಕ್ಕದ ಜಮೀನುಗಳಲ್ಲಿ ನೀರು ನುಗ್ಗಿ ಮತ್ತು ಹಳ್ಳ ಸೇರಿಕೊಂಡು ಹೋಗಿದೆ.