ಮನೋಲ್ಲಾಸ; ಉತ್ಸಾಹ ಕುಂದದಿರಲಿ

Georgia
Published on
ಸೀತಾಪಹರಣಾನಂತರ ಮಡದಿ ಸೀತೆಯನ್ನು ನೆನೆಯುತ್ತ, ಶ್ರೀರಾಮ ಒಂದೆಡೆ ಕುಳಿತಿರುವಾಗ ಅನುಜ ಲಕ್ಷ್ಮಣ ಬಂದು ರಾಮನನ್ನು ಸಮಾಧಾನಪಡಿಸಿದ. ಅಣ್ಣ ರಾಮನಿಗೆ ವೀರೋಚಿತ ಮಾತುಗಳನ್ನು ಆಡಿ, ಉತ್ಸಾಹ ತುಂಬಿದ. ಲಕ್ಷ್ಮಣ ಹೇಳಿದ ಆ ಮುತ್ತಿನಂತಹ ಮಾತು-

ಉತ್ಸಾಹೋ ಬಲವಾನಾರ್ಯ ನಾಸ್ತಯ ಬಲಮ್ |

ಸೋತ್ಸಾಹಸ್ಯಾಸ್ತಿ ಲೋಕೇಸ್ಮಿನ್ನ ಕಿಂಚಿದಪಿ ದುರ್ಲಭಮ್ ||

(ವಾ.ರಾ. ಕಿಷ್ಕಿಂಧಾಕಾಂಡ 1-122) ‘ಜಗತ್ತಿನಲ್ಲಿ ಉತ್ಸಾಹ ಎನ್ನುವುದು ಬಹಳ ಪ್ರಬಲವಾದದ್ದಾಗಿದೆ. ಈ ಉತ್ಸಾಹಕ್ಕಿಂತ ಪ್ರಬಲವಾದದ್ದು ಮತ್ತೊಂದಿಲ್ಲ. ಹೀಗಾಗಿ ಉತ್ಸಾಹದಿಂದ ಕೂಡಿದಂತಹ ವ್ಯಕ್ತಿಗೆ ಲೋಕದಲ್ಲಿ ದುರ್ಲಭವಾದದ್ದು ಯಾವುದೂ ಇಲ್ಲ’. ಲಕ್ಷ್ಮಣ ತುಂಬಿದ ಆ ಉತ್ಸಾಹವೇ ಶ್ರೀರಾಮ ಸಮಗ್ರ ರಾಕ್ಷಸಸೇನೆಯನ್ನು ಸದೆಬಡೆದು, ಸೀತೆಯನ್ನು ಮರಳಿ ಕರೆತರಲು ದೊಡ್ಡ ಮುನ್ನುಡಿಯಾಯಿತು. ಸೀತೆಯನ್ನು ಮರಳಿ ಕರೆತರುವುದು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ ಕಾರಣ ಹಲವು. 1) ಮೊದಲಿಗೆ ಸೀತೆ ಎಲ್ಲಿ ಇದ್ದಾಳೆ ಎನ್ನುವುದೇ ಗೊತ್ತಿರಲಿಲ್ಲ. 2) ಲಂಕೆಯಲ್ಲಿದ್ದಾಳೆ ಎಂದು ಗೊತ್ತಾದ ನಂತರವೂ ನೂರಾರು ಯೋಜನಗಳ ಸಮುದ್ರವನ್ನು ವಾನರಸೈನ್ಯದೊಂದಿಗೆ ದಾಟುವುದು ಅಸಾಧ್ಯವಾಗಿತ್ತು. 3) ಲಂಕೆಯಲ್ಲಿರುವವರು ಸಾಮಾನ್ಯವ್ಯಕ್ತಿಗಳಾಗಿರಲಿಲ್ಲ, ಒಬ್ಬೊಬ್ಬರೂ ಜಗತ್ತನ್ನೇ ಗೆಲ್ಲಬಲ್ಲ ಶಕ್ತಿ ಹೊಂದಿದವರಾಗಿದ್ದರು. 4) ರಾವಣನ ಸೇನೆ ಎಷ್ಟಿತ್ತು? 36,000 ಮಹೌಘ ಸೈನ್ಯ ರಾವಣನದ್ದು. ಇಷ್ಟೆಲ್ಲ ದುಸ್ಸಾಧ್ಯವಾದ ಕಾರ್ಯಗಳನ್ನು ಸುಲಭಸಾಧ್ಯವನ್ನಾಗಿಸಿ, ರಾವಣ, ಅವನ ಸಹಚರರು-ಪುತ್ರರು-ಸೈನ್ಯ ಎಲ್ಲವನ್ನೂ ಸಂಹರಿಸಿ, ಸೀತೆಯನ್ನು ಮರಳಿ ಕರೆತಂದ ಶ್ರೀರಾಮ. ಇದು ಶ್ರೀರಾಮನಲ್ಲಿ ಮೈದುಂಬಿದ್ದ ಉತ್ಸಾಹದ ಫಲ.

ನಾವೂ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆಗಳು. ಮಗದೊಮ್ಮೆ ದೊಡ್ಡ ದೊಡ್ಡ ಸಮಸ್ಯೆಗಳು. ಆದರೆ ಸಮಸ್ಯೆ ಬಂತೆಂದು ಆಕಾಶವೇ ಕಳಚಿ ಬಿದ್ದಂತೆ ಕೈಕಟ್ಟಿ ಕುಳಿತರೆ ಇನ್ನೂ ಅಧಃಪತನ ಹೊಂದುತ್ತೇವೆ. ಎಂತಹದೇ ಸಮಸ್ಯೆ ಎದುರಾದರೂ ಉತ್ಸಾಹ ಎಂಬ ಒಂದು ಬ್ರಹ್ಮಾಸ್ತ್ರ ನಮ್ಮಲ್ಲಿದ್ದರೆ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿ ಯಶಸ್ಸು ಕಾಣಬಹುದು. ಯಾವುದೇ ಒಂದು ಕಾರ್ಯವನ್ನು ಪೂರ್ಣಗೊಳಿಸಿ ಯಶಸ್ವಿಯಾಗಬೇಕಾದರೆ ಉತ್ಸಾಹ ಎನ್ನುವುದು ಮಹತ್ವದ ಸಾಧನವಾಗಿದೆ. ಉಳಿದ ಸಾಧನಗಳು ಕಡಿಮೆ ಇದ್ದರೂ ಉತ್ಸಾಹ ಮೈದುಂಬಿದ್ದರೆ ಅಂತಹವನಿಗೆ ಜಯ-ಯಶಸ್ಸು ನಿಶ್ಚಿತ. ಯಾವುದೇ ಸಂದರ್ಭದಲ್ಲಿಯೂ ಉತ್ಸಾಹ ಕುಂದುವುದು ಬೇಡ. ಕುಂದದ ಉತ್ಸಾಹ ಉನ್ನತಿಗೆ ಕಾರಣ.

(ಲೇಖಕರು ಸಂಸ್ಕೃತ ವಿದ್ವಾಂಸರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net