

ಭಾರತವು ಯುವ ರಾಷ್ಟ್ರ. ಚೀನಾ, ಜಪಾನ್ ಮುಂತಾದ ದೇಶಗಳಿಗೆ ಹೋಲಿಸಿದರೆ, ನಮ್ಮಲ್ಲಿ ಯುವ ಜನಸಂಖ್ಯೆ ಬಹಳ ಹೆಚ್ಚಾಗಿದೆ. 144 ಕೋಟಿ ಜನರಲ್ಲಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇಕಡ 50 ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇಕಡ 65 ಆಗಿದೆ. ಈ ಅಂಕಿ-ಅಂಶಗಳು ಭಾರತಕ್ಕೆ ದೊಡ್ಡ ಶಕ್ತಿ, ಆದರೆ ಈ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.
ಇಂದಿನ ಯುವಜನತೆಯ ಸಾಮಾನ್ಯ ಉದ್ದೇಶ ಉತ್ತಮ ಅಂಕಗಳೊಂದಿಗೆ ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿ, ಭದ್ರವಾದ ಕೆಲಸ ಪಡೆದು, ಸುಖವಾಗಿ ಬದುಕುವುದು. ಆದರೆ, ಹೆಚ್ಚಿನವರು ವಿದ್ಯಾರ್ಥಿ ಜೀವನದಲ್ಲಿ ಓದುವ ಒತ್ತಡ ಅನುಭವಿಸುತ್ತಿದ್ದಾರೆ. ಕಾಲೇಜಿಗೆ ಬಂಕ್ ಹೊಡೆದು, ಸಿನಿಮಾ ವೀಕ್ಷಣೆ ಅಥವಾ ದ್ವಿಚಕ್ರವಾಹನಗಳಲ್ಲಿ ಸುಮ್ಮನೆ ಸುತ್ತಾಡುವುದು, ಪರೀಕ್ಷೆಯ ಕೊನೆಯ ಕ್ಷಣದಲ್ಲಿ ಓದಿ ಹೇಗೋ ಪಾಸ್ ಆಗುವುದು... ಇವುಗಳೇ ಸಾಮಾನ್ಯ ಸಂಗತಿಗಳಾಗಿವೆ. ಇದರ ಹಿಂದೆ ಶಿಕ್ಷಣ ಪದ್ಧತಿ, ಪೋಷಕರ ನಿರೀಕ್ಷೆಗಳು ಮತ್ತು ಸಮಾಜದ ಒತ್ತಡದಂಥ ಮುಖ್ಯ ಕಾರಣಗಳಿವೆ. ಇದು ಅಕ್ಷರಜ್ಞಾನದ ಪ್ರಮಾಣವನ್ನು ಹೆಚ್ಚಿಸಬಹುದು, ಆದರೆ ನೈಜ ಜ್ಞಾನವೃದ್ಧಿಯನ್ನು ಖಚಿತಪಡಿಸುವುದಿಲ್ಲ.
ಪೋಷಕರು ಮತ್ತು ಶಿಕ್ಷಕರು ಕಷ್ಟ ಪಟ್ಟು ಓದು ಎನ್ನುವ ಬದಲು, ಇಷ್ಟಪಟ್ಟು ಓದು ಎಂಬ ನಿಲುವನ್ನು ತೆಗೆದುಕೊಂಡರೆ, ಶಿಕ್ಷಣವು ಆಪ್ಯಾಯಮಾನ ಹಾಗೂ ಪರಿಣಾಮಕಾರಿ ಆಗಬಹುದು. ಆಲೋಚನೆಗೆ ಆಸಕ್ತಿ ಮತ್ತು ಪ್ರೇರಣೆ ನೀಡಿದರೆ, ನಮ್ಮ ಯುವಜನತೆ ಖಚಿತವಾಗಿಯೂ ರಾಷ್ಟ್ರದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬಹುದು. 1986ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ಬಾಲಕನೊಬ್ಬ ತನ್ನ 17ನೇ ವಯಸ್ಸಿನಲ್ಲಿಯೇ ಗ್ಲೋಬಲ್ ಕಂಪನಿಯನ್ನು ಪ್ರಾರಂಭಿಸುತ್ತೇನೆ ಎಂದು ತಂದೆಯ ಬಳಿ ಕಂಪ್ಯೂಟರ್ ಪಡೆದು ಸ್ವಂತವಾಗಿ ವೆಬ್ ಸೈಟ್ ಡಿಸೈನ್ ಮಾಡಿ ಸಮಾಜಕ್ಕೆ ನೆರವಾಗುತ್ತಾನೆ. ನಂತರ ಜಾಗತಿಕ ಮಟ್ಟದಲ್ಲಿ ಯುವ ಉದ್ಯಮಿ ಪ್ರಶಸ್ತಿಗೆ ಪಾತ್ರನಾಗುತ್ತಾನೆ. ಇಂತಹ ಅದ್ಭುತ ಶಕ್ತಿ ನಮ್ಮಲ್ಲಿ ಅನೇಕರಿಗೆ ಇದೆ.