

ತಿ.ನರಸೀಪುರ: ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಹೇಳಿದರು.
ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ವಿಶ್ವಕರ್ಮ ಜಯಂತ್ಯುತ್ಸವ ತಾಲೂಕು ಸಮಿತಿ ಸಹಯೋಗದಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಲ್ಪಸಂಖ್ಯಾತರಾಗಿರುವ ವಿಶ್ವಕರ್ಮ ಸಮಾಜದವರು 5 ಮೂಲ ಕುಲ ಕಸುಬನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಪ್ರಸಕ್ತ ಕಾಲ ಘಟ್ಟದಲ್ಲಿ ಕುಲ ಕಸುಬು ಕ್ಷೀಣಿಸುತ್ತಿದ್ದು, ಸಮುದಾಯದ ಯುವ ಸಮೂಹ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಆ ಮೂಲಕ ಉನ್ನತ ವ್ಯಾಸಾಂಗ ಮಾಡಿಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವಕರ್ಮ ಜಯಂತ್ಯುತ್ಸವ ಸಮಿತಿಯ ಕಾನೂನು ಸಲಹೆಗಾರ ಬನ್ನೂರು ಪ್ರಭಾಕರ್ ಮಾತನಾಡಿ, ಸರ್ಕಾರ ವಿಶ್ವಕರ್ಮರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದರೂ ಅದು ಬಂಡವಾಳಶಾಹಿಗಳ ಪಾಲಾಗುತ್ತಿದೆ. ಅದನ್ನು ಅರ್ಹರು ಪಡೆದುಕೊಳ್ಳುವ ಮೂಲಕ ಆರ್ಥಿಕ, ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಬೇಕಿದೆ ಎಂದರು.
ಸಮಾಜದವರಾದ ತಹಸೀಲ್ದಾರ್ ಸುರೇಶ್ ಆಚಾರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮೇಗೌಡ, ವಿಶ್ವ ಕರ್ಮ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆಬ್ಬೇಹುಂಡಿ ಸಿದ್ದಪ್ಪಾಜಿ, ಗೌರವಾಧ್ಯಕ್ಷ ಬಸವರಾಜಾಚಾರ್, ಉಪಾಧ್ಯಕ್ಷ ಹುಣಸೂರು ಮಹೇಶ್, ಕೃಷಿ ಅಧಿಕಾರಿ ಸಿದ್ದಾಚಾರ್, ಮುಖಂಡರಾದ ಗ್ಯಾರೇಜ್ ಸೋಮಣ್ಣ, ಪ್ರಕಾಶಾಚಾರಿ, ಶ್ರೀನಿವಾಸಾಚಾರಿ, ಸಾಮಿಲ್ ಸಿದ್ದಪ್ಪಾಜಿ, ಕೆಂಪಾಚಾರ್, ಹೆಗ್ಗೂರು ಈಶ್ವರಾಚಾರ್, ಮೂಗೂರು ಪ್ರಭಾಕರ್, ಚಿಟಗಯ್ಯನ ಕೊಪ್ಪಲು ರವಿ, ತಲಕಾಡು ಗಜೇಂದ್ರ ಇತರರಿದ್ದರು.