ಸತ್ಯ ನಿತ್ಯದ ಅರಿವಿರಲಿ

2-67e4362c3dbc0
Published on
ಕಡಕೋಳದ ಮಡಿವಾಳಪ್ಪನವರು ತಮ್ಮ ಪದ್ಯದಲ್ಲಿ ಹೀಗೆ ತಿಳಿಸುತ್ತಾರೆ. ಅರಿವು ತಿಳಿದು ಮರುವಿನೊಳಗೆ ಬೀಳುವುದೇಕೆ? ಅದು ಹೇಗಾಗುವುದೆಂದರೆ ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತೆ. ಇದೇ ವಿಚಾರವಾಗಿ ಬಸವಣ್ಣನವರ ಅಕ್ಕ ಶಿವಶರಣೆ ಅಕ್ಕನಾಗಮ್ಮ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ:

‘ಹೊತ್ತು ಹೊತ್ತಿಗೆ ಲಿಂಗ ಪೂಜೆ ಮಾಡಿಯೂ ಮತ್ತೆ ಸತ್ಯವಾದದು ನಿತ್ಯವಾದುದು ಎಂದರಿಯದೆ ಕೆಟ್ಟಿರೆಲ್ಲ ಜಗವು ಸತ್ಯ ನುಡಿವ ಶರಣರ ಕಂಡರೆ ಕತ್ತೆ ಮಾನವರೆತ್ತ ಬಲ್ಲರೋ? ಅಸತ್ಯವನೇ ನುಡಿದು, ಹುಸಿಯನೇ ಬೋಧಿಸುವರು ಕಂಡರೆ ಇತ್ತ ಬನ್ನಿ ಎಂಬರು/ ಇಂತಿಪ್ಪ ಅನಿತ್ಯ ದೇಹಿಗಳ ಭಕ್ತರೆಂದು ಜಂಗಮವೆಂದು ನೋಡಿ ಮಾತನಾಡಿ ನೀಡಿದರೆ ಅಘೊರ ನರಕ.... ಇದು ಬಹಳ ಮಹತ್ವದ ವಚನ. ತ್ರಿಕಾಲ ಲಿಂಗ ಪೂಜೆ ಮಾಡಿಯೂ ಇದರ ತತ್ವವನು ತಿಳಿಯಲಿಲ್ಲವೆಂದರೆ ಹುರುಳಿಲ್ಲದ ಪೂಜೆಯಾಗುವುದು. ಸತ್ಯ ನಿತ್ಯ ಅರಿಯಲಾರದೆ ಜಗವು ಕೆಟ್ಟಿತಲ್ಲ ಎಂದು ಮನನೊಂದು ನುಡಿದರು.

ಇಂದಿನ ಕಾಲದಲ್ಲಿ ಸತ್ಯವ ಅಸತ್ಯವ ಮಾಡಿ ಅಸತ್ಯವ ಸತ್ಯವ ಮಾಡಿ ನುಡಿದ ಜನರೇ ಹೆಚ್ಚಾಗಿದ್ದಾರೆ. ಸಹಜವನರಿಯದ ಅಸಹಜರಿಗೆ ಶಿವನೊಲಿ ಎಂದರೆ ಎಂತೊಲಿವನು ಎಂದು ಶರಣರು ನುಡಿದ್ದಾರೆ. ಈ ಜನರು ಸತ್ಯವ ನುಡಿವ ಶರಣರ ಕಂಡರೆ ಅವರಿಗೆ ಕತ್ತೆ ಮಾನವರೆಲ್ಲ ಬಲ್ಲರೋ ಎಂಬ ಅಕ್ಕನಾಗಮ್ಮ ಪ್ರಶ್ನಿಸುವರು.

ಈ ಜನರು ಎಂಥವರಿಗೆ ಮೆಚ್ಚುವರು? ಬೆಳಗ್ಗೆಯಿಂದ ಸಂಜೆವರೆಗೆ ಕನಸು ಮನಸಿನಲ್ಲೂ ಅಸತ್ಯ ಹೇಳುವ ಜನರಿಗೆ ಸತ್ಯದ ಬೋಧನೆ ಮಾಡಿದೆ. ಹುಸಿಯನೇ ಬೋಧಿಸುವವ ಹಸುಕರ ಕಂಡರೆ ಇತ್ತ ಬನ್ನಿ ಎಂಬರು. ಸತ್ಯ ನಿತ್ಯವಾದುದನ್ನು ಬೋಧಿಸುವವರು ಕಂಡರೆ ಅಂಥವರಿಗೆ ಸ್ವಲ್ಪಾದರೂ ಗೌರವ ಕೊಡದ ಮನುಜರನ್ನು ಭಕ್ತ, ಜಂಗಮವೆಂದು ನೋಡಿ ಮಾತನಾಡಿದರೆ ಬಸವಣ್ಣ ಹೇಳುವರು ‘ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು’ ಎಂದು. ಅದಕ್ಕೆ ಸತ್ಯದ ನಿತ್ಯದ ಅರಿವನ್ನಿರಿತು ಲಿಂಗ ಪೂಜಿಸಬೇಕು. ಕನ್ನಡದಲ್ಲಿ ಒಂದು ಗಾದೆಯಿದೆ, ‘ಕಳ್ಳರ ಪೂಜೆಗೆ ಹೂವು ಪತ್ರಿ ದಂಡವಂತೆ’ ಎಂದು. ಹೀಗಾಗಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net