

ದೇಶದ ‘ಹೃದಯ’ ಎಂದೇ ಕರೆಯಲ್ಪಡುವ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ನಾಲ್ಕು ದಿನಗಳ ಬಳಿಕವೂ ನಿಯಂತ್ರಣಕ್ಕೆ ಬಂದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧ ಸಂಘರ್ಷದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಈವರೆಗೆ 22 ಜನರು ಪ್ರಾಣ ಕಳೆದುಕೊಂಡಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಸ್ಪರ ಗುಂಡಿನ ದಾಳಿ, ವಾಹನ, ಅಂಗಡಿಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸೇರಿ ಹಲವು ಅಹಿತಕರ ಘಟನೆಗಳು ಸಂಭವಿಸಿವೆ. 1984ರಲ್ಲಿ ದೆಹಲಿಯಲ್ಲಿ ನಡೆದಿದ್ದ ಸಿಖ್ ಹತ್ಯಾಕಾಂಡದಂಥ ಚಿತ್ರಣ ಮರುಕಳಿಸಿದ್ದು, ಶಾಂತಿಸ್ಥಾಪನೆ ನಿಟ್ಟಿನಲ್ಲಿ ಗೃಹ ಸಚಿವಾಲಯ ಸರಣಿ ಸಭೆಗಳನ್ನು ನಡೆಸಿದೆ. ಆದರೂ, ಪರಿಸ್ಥಿತಿ ಹತೋಟಿಗೆ ಬಂದಿಲ್ಲ.
ಈ ಮಧ್ಯೆ, ಸಿಎಎ ವಿರುದ್ಧದ ರ್ಯಾಲಿಗಳಲ್ಲಿ ಹಿಂಸೆ, ಪ್ರಚೋದನಾಕಾರಿ ಭಾಷಣ ಮತ್ತು ಈ ಬಗ್ಗೆ ಪೊಲೀಸ್ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಬುಧವಾರ ಸುಪ್ರೀಂಕೋರ್ಟ್ ಮತ್ತು ದೆಹಲಿ ಹೈಕೋರ್ಟ್ನಲ್ಲಿ ಪ್ರತ್ಯೇಕ ವಿಚಾರಣೆ ನಡೆದಿದೆ. ‘ಹಿಂಸೆ ಹರಡುವವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು. ದೆಹಲಿಯಲ್ಲಿ ಮತ್ತೊಂದು ‘1984’ ಸಂಭವಿಸಬಾರದು ಮತ್ತು ಝೆಡ್ ಭದ್ರತೆ ಹೊಂದಿರುವ ಗಣ್ಯರು ಭರವಸೆ ಹುಟ್ಟಿಸಲು ಜನರನ್ನು ತಲುಪಬೇಕು’ ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಹೇಳಿದೆ. ಮತ್ತೊಂದೆಡೆ, ಹೈಕೋರ್ಟ್, ‘ಹಿಂಸೆ ಪ್ರಚೋದಿಸುವವರ ವಿರುದ್ಧ ತಕ್ಷಣ ಎಫ್ಐಆರ್ ದಾಖಲು ಮಾಡಲಾಗುತ್ತಿಲ್ಲ, ಏಕೆ?’ ಎಂದು ಪ್ರಶ್ನಿಸಿದೆ. ಒಟ್ಟಾರೆ, ದೆಹಲಿ ಭಯದ ನೆರಳಿನಲ್ಲಿ ಬಳಲುತ್ತಿದೆ, ಜನರು ಮುಂದೇನು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಕಾನೂನಿನ ಅಪವ್ಯಾಖ್ಯಾನ, ತಪು್ಪ ಮಾಹಿತಿ ಹರಡುವಿಕೆ, ಪ್ರಚೋದನಾಕಾರಿ ಮಾತು ಹೇಗೆ ಹೋರಾಟದ ಹೆಸರಲ್ಲಿ ಹಿಂಸಾಚಾರವನ್ನು ಹರಡುತ್ತದೆ ಎಂಬುದಕ್ಕೆ ಸಿಎಎ ವಿರೋಧಿ ರ್ಯಾಲಿಗಳು ಸಾಕ್ಷಿ. ಸಿಎಎ ಪರವಾಗಿ ಮುಂಚೆಯಿಂದಲೂ ಶಾಂತಿಯುತ ಹೋರಾಟಗಳೇ ನಡೆದಿವೆ. ಆದರೆ, ಸಿಎಎ ವಿರೋಧದ ನೆಪದಲ್ಲಿ ವಿಧ್ವಂಸಕ ಶಕ್ತಿಗಳು ಹಿಂಸೆ ಹರಡುವ ಮೂಲಕ ಜನರ ಪ್ರಾಣಕ್ಕೆ ಎರವಾಗುತ್ತಿರುವುದರಿಂದ ಜನಸಾಮಾನ್ಯರೂ ತಾಳ್ಮೆ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಸಿಎಎ ವಿರೋಧಿ ಹೋರಾಟ ದಿಕ್ಕು ತಪ್ಪುತ್ತಿದೆ ಎಂಬ ಸ್ಪಷ್ಟ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ದೆಹಲಿಯ ಹಿಂಸಾಚಾರ ಅದನ್ನು ಮತ್ತಷ್ಟು ಪುಷ್ಟೀಕರಿಸಿದೆ. ಈಗಲೂ, ಕಠಿಣಕ್ರಮಕ್ಕೆ ಮುಂದಾಗದಿದ್ದಲ್ಲಿ ಇಂಥ ಘಟನೆಗಳು ದೇಶಾದ್ಯಂತ ಹರಡುವ ಆತಂಕವಿದೆ. ಹಾಗಾಗಿ, ಸಿಎಎ ನೆಪವಾಗಿಸಿಕೊಂಡು ಸಮಾಜದ ಸೌಹಾರ್ದತೆ ಹಾಳು ಮಾಡಲು ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ಮತ್ತು ಅವರ ಹಿಂದಿರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆಯೇ ಈ ಘಟನೆಗಳು ಸಂಭವಿಸಿದ್ದು, ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆಯೇ ಎಂಬ ಮಾತು ಕೇಳಿಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಹಾನಿ ತಂದರೆ ಸರ್ಕಾರ ಹಿಂದಡಿ ಇಡಬಹುದು ಎಂಬ ಲೆಕ್ಕಾಚಾರ ಇಂಥ ಕೃತ್ಯಗಳ ಹಿಂದೆ ಇರಬಹುದು. ಅದೇನಿದ್ದರೂ, ದೆಹಲಿಯಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳುವಂತೆ, ಬೇರೆಡೆಯೂ ಇಂಥ ಹಿಂಸಾಚಾರಗಳು ಸಂಭವಿಸದಂತೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.