

ಭಯೋತ್ಪಾದನೆಯನ್ನು ಪೋಷಿಸಿಕೊಂಡೇ ಬಂದ ಪಾಕಿಸ್ತಾನ ಇಷ್ಟು ವರ್ಷಗಳ ಕಾಲ ಹಸಿಸುಳ್ಳು ಹೇಳುತ್ತಲೇ ಬಂದಿತ್ತು. ಮುಂಬೈ ದಾಳಿಯ ಸಂಚುಕೋರರು ಪಾಕ್ನಲ್ಲಿ ಅಡಗಿದ್ದರೂ, ದಾಳಿಯ ಕುರಿತಂತೆ ಭಾರತ ಸರಣಿ ಸಾಕ್ಷ್ಯಗಳನ್ನು ಒದಗಿಸಿದರೂ ಅದು ವಾಸ್ತವ ಒಪ್ಪಿಕೊಳ್ಳಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಪ್ಪೊಪ್ಪಿಕೊಂಡಿದ್ದು, ಭಯೋತ್ಪಾದನೆಯ ಪೋಷಣೆ ಈಗ ತನ್ನ ರಾಷ್ಟ್ರಕ್ಕೇ ಕಂಟಕವಾಗಿ ಕಾಡುತ್ತಿದೆ ಎಂದು ಹೇಳುವ ಮೂಲಕ ತಾನು ‘ಉಗ್ರ ರಾಷ್ಟ್ರ’ ಎಂಬುದನ್ನು ಸಾಬೀತು ಪಡಿಸಿದೆ.
‘ಭಯೋತ್ಪಾದಕ ಸಂಘಟನೆಗಳಿಗೆ ನೆರವು, ತರಬೇತಿ ಮತ್ತು ಆರ್ಥಿಕ ಸಹಕಾರ ನೀಡುತ್ತ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಳಕು ಕೆಲಸಗಳನ್ನು ಪಾಕಿಸ್ತಾನ ಮಾಡುತ್ತಲೇ ಬಂದ ತಪ್ಪಿಗೆ ಈಗ ತೀವ್ರವಾಗಿ ಪರಿತಪಿಸುವಂತಾಗಿದೆ. ಇಂಥ ಕೊಳಕು ಕೆಲಸವನ್ನು ಅಮೆರಿಕಕ್ಕಾಗಿ ಮೂರು ದಶಕಗಳಿಂದ ಮಾಡುತ್ತಲೇ ಬಂದಿದ್ದೇವೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ‘ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ಸುದೀರ್ಘ ಇತಿಹಾಸ ಇದೆಯೇ?’ ಎಂಬ ‘ಸ್ಕೈ ನ್ಯೂಸ್’ ಪ್ರಶ್ನೆಗೆ ಉತ್ತರಿಸುವಾಗ ಆಸೀಫ್ ಹೀಗೆ ಹೇಳಿದ್ದಾರೆ. ಈ ಮೂಲಕ ಕಳೆದ ಮೂರು ದಶಕಗಳಿಂದ ಭಯೋತ್ಪಾದನೆಗೆ ಪಾಕಿಸ್ತಾನ ಸರ್ವರೀತಿಯ ಸಹಕಾರ ನೀಡುವುದನ್ನು ಒಪ್ಪಿಕೊಂಡಿದ್ದಾರೆ.
ಇದು ಹೊರಪ್ರಪಂಚಕ್ಕೆ ಗೊತ್ತಿರುವಂಥದ್ದೇ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ, ಜಾಗತಿಕ ಶೃಂಗಗಳಲ್ಲಿಯೂ ಈ ವಿಷಯ ಪ್ರತಿಧ್ವನಿಸಿದೆ. ಆಂತರಿಕವಾಗಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಪಾಕ್ ಇಸ್ಲಾಮಿಕ್ ಉಗ್ರ ಸಂಘಟನೆಗಳನ್ನು ಸಾಕುವುದು ನಿಲ್ಲಿಸಿಲ್ಲ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯಲ್ಲೂ ಪಾಕಿಸ್ತಾನದ ಕೈವಾಡವಿರುವುದು ಸಾಬೀತಾಗಿದೆ. ತಡವಾಗಿ ಎಚ್ಚೆತ್ತುಕೊಂಡ ಅಮೆರಿಕ 9/11ರ ದಾಳಿಯ ನಂತರ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಹಲವು ಉಗ್ರ ಸಂಘಟನೆಗಳನ್ನು ನಿಷೇಧಿಸಿ, ಅವುಗಳ ಹಣಕಾಸು ಮೂಲಕ್ಕೆ ಪೆಟ್ಟು ನೀಡಿದೆ.
ಆಸೀಫ್ ಹೇಳಿಕೆಯನ್ನು ಜಾಗತಿಕ ವಲಯ ಗಂಭೀರವಾಗಿ ಪರಿಗಣಿಸಬೇಕು. ಸತ್ಯ ತುಂಬ ದಿನಗಳ ಕಾಲ ಅದುಮಿಡಲು ಸಾಧ್ಯವಿಲ್ಲ ಎಂಬ ಮಾತು ಪಾಕ್ ವಿಷಯದಲ್ಲೂ ನಿಜವಾಗಿದೆ. ಈಗ ಯಾವುದೇ ಮುಲಾಜಿಲ್ಲದೆ ಅಂತಾರಾಷ್ಟ್ರೀಯ ವಲಯ ಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಿ, ಅದಕ್ಕೆ ನೀಡುತ್ತಿರುವ ಎಲ್ಲ ನೆರವನ್ನು ಕೂಡಲೇ ನಿಲ್ಲಿಸಬೇಕು. ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿಸಬೇಕು.
ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರಾಷ್ಟ್ರಕ್ಕೆ ಪಾಠ ಕಲಿಸಲಿ. ಪಾಕ್ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು, ಉಗ್ರ ಶಿಬಿರಗಳು ಮತ್ತು ಈ ಜಾಲಕ್ಕೆ ಶಸ್ತ್ರಾಸ್ತ್ರ ಪೂರೈಸುವ ದುಷ್ಟಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಂತಾರಾಷ್ಟ್ರೀಯ ವಲಯ ಒಂದಾಗಿ ಪಾಕ್ನ ಸದೆಬಡಿಯಲು ಇದು ಸಕಾಲ. ಏಕೆಂದರೆ, ಭಯೋತ್ಪಾದನೆಯ ಸವಾಲು ಒಂದು ರಾಷ್ಟ್ರಕ್ಕೆ ಸೀಮಿತವಾಗಿ ಉಳಿದಿಲ್ಲ. ಈ ಜಾಗತಿಕ ಸಮಸ್ಯೆಯ ವಿರುದ್ಧ ಸಂಘಟಿತ ಹೋರಾಟ ನಡೆಯಲಿ, ಪಾಕ್ ತಕ್ಕ ಪ್ರಾಯಶ್ಚಿತ ಅನುಭವಿಸಲಿ.