ಆಯುರ್ವೇದ ಪದ್ಧತಿಗೂ ಸಿಗಲಿ ಮನ್ನಣೆ

ayurveda
Published on

ಶಿವಮೊಗ್ಗ: ಆಯುರ್ವೇದ ಎಂದಿಗೂ ನೂತನ. ಯೋಗಕ್ಕೆ ಸಿಕ್ಕಂತೆ ಆಯುರ್ವೇದಕ್ಕೂ ಹೆಚ್ಚಿನ ಮನ್ನಣೆ ಸಿಗಬೇಕು ಎಂದು ಆಯುರ್ವೇ ವೈದ್ಯ ಡಾ. ಎಂ.ವಿ.ಗುರುರಾಜ್ ಹೇಳಿದರು.

ಯೋಗ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ ಧನ್ವಂತರಿ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಕರೊನಾ ಸಂದರ್ಭ ನಮಗೆ ಆರೋಗ್ಯದ ಬೆಲೆ ತಿಳಿಯಿತು. ಅಂದು ಆರೋಗ್ಯಕ್ಕಾಗಿ ಜನರು ಏನೆಲ್ಲಾ ಪ್ರಯತ್ನ ಮಾಡಬೇಕಾಯಿತು. ಆಗ ಆಯುರ್ವೇದವೂ ಸಾಕಷ್ಟು ಸಹಕಾರಿಯಾಗಿತ್ತು. ಈ ಪದ್ಧತಿ ಮೂಲಕ ಅನೇಕರು ಕರೊನಾ ಬರುವುದನ್ನು ತಡೆಗಟ್ಟಿದರು ಎಂದು ವಿವರಿಸಿದರು.

ಎಲ್ಲ ಆರೋಗ್ಯ ವ್ಯವಸ್ಥೆಗಳನ್ನು ಪಡೆದು ಎಲ್ಲೂ ಕಾಯಿಲೆ ವಾಸಿಯಾಗಿಲ್ಲ ಎಂಬುದು ತಿಳಿದ ಮೇಲೆ ಅನೇಕ ಜನರು ಆಯುರ್ವೇದದತ್ತ ಮುಖ ಮಾಡುತ್ತಿದ್ದಾರೆ. ನಮ್ಮ ಶಿಕ್ಷಣದಲ್ಲಿ ಆಯುರ್ವೇದದ ಬಗ್ಗೆ ಸರಿಯಾಗಿ ತಿಳಿಸದಿರುವುದೇ ಈ ನಿರಾಸಕ್ತಿಗೆ ಕಾರಣ. ಆಯುರ್ವೇದ ಕೇವಲ ದೈಹಿಕ ಸಮಸ್ಯೆಗಳನ್ನು ಮಾತ್ರವಲ್ಲ ಮಾನಸಿಕ ಆರೋಗ್ಯವನ್ನು ಕಾಪಾಡಬಲ್ಲದು ಎಂದು ಹೇಳಿದರು.

ದೇಹದ ದೋಷ ಸಂಚಯಗಳನ್ನು ಹೊರಕಳಿಸಲು ಪಂಚಕರ್ಮ ಸೂಕ್ತ. ಇದರಿಂದ ದೇಹ ಶುದ್ಧ ಮಾಡಿ ಕಾಯಿಲೆಗಳನ್ನು ತಡೆಗಟ್ಟಬಹುದು. ಇಂದು ಇಂಟರ್‌ನೆಟ್ ಮೂಲಕ ಸತ್ಯದೊಂದಿಗೆ ಸುಳ್ಳುಗಳೂ ನಮ್ಮನ್ನು ಸೇರಿಕೊಳ್ಳುತ್ತಿರುವುದು ಅಪಾಯದ ಸಂಗತಿ. ಹೀಗಾಗಿ ನಾವು ಎಚ್ಚರದಿಂದ ಇರಬೇಕು. ಅಂತರ್ಜಾಲ ತಾಣದಲ್ಲಿ ಆರೋಗ್ಯದ ಬಗ್ಗೆ ಇರುವ ಎಲ್ಲ ಸಂಗತಿಗಳೂ ಸತ್ಯವಲ್ಲ ಎಂಬ ಜಾಗ್ರತೆ ಇರಬೇಕೆಂದರು.

ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಸಂಜಯ್‌ಕುಮಾರ್ ಮಾತನಾಡಿ, ನಾವಿಂದು ನಿರ್ಣಾಯಕ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಅರಿವಿನ ಕೊರತೆ ಕಾಡುತ್ತಿದೆ. ಜೀವನ ಶೈಲಿ ಬದಲಾಗಿದೆ. ನಾವೆತ್ತ ಸಾಗುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಇದೆ. ಕಾಯಿಲೆ ಮಾತ್ರ ಕಡಿಮೆಯಾಗುತ್ತಿಲ್ಲ. ಇರುವ ವ್ಯವಸ್ಥೆಯನ್ನು ನಾವು ಸಮಪರ್ಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ನಮ್ಮ ಪರಂಪರೆಯಲ್ಲೇ ಪರಿಹಾರವಿದೆ. ಯೋಗ ಹಾಗೂ ಆಯುರ್ವೇದ ಒಂದೇ ನಾಣ್ಯದ ಎರಡು ಮುಖಗಳು. ಇವರೆಡೂ ಜೀವನದ ಉದ್ದೇಶವನ್ನು ಸಾರುತ್ತವೆ. ಇವು ನಮ್ಮ ಪರಂಪರೆಯ ಜ್ಞಾನ ಭಂಡಾರಗಳು ಎಂದು ಬಣ್ಣಿಸಿದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಧನ್ವಂತರಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ಹಿರಿಯ ವೈದ್ಯರಾದ ಡಾ.ಸುರೇಶ್ ಹಾಗೂ ಡಾ.ಕೃಷ್ಣೋಜಿರಾವ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net