

ನವದೆಹಲಿ/ಮುಂಬೈ: ಕೋವಿಡ್ ಲಾಕ್ಡೌನ್ ನಡುವೆ ಮಹಾರಾಷ್ಟ್ರದಲ್ಲಿ ಉದ್ಘವಿಸಬಹುದಾಗಿದ್ದ ಸಂವಿಧಾನ ಬಿಕ್ಕಟ್ಟಿಗೆ ಮಂಗಳ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರ ವಿಧಾನಪರಿಷತ್ನ 9 ಸ್ಥಾನಗಳಿಗೆ ಮೇ 21ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಬಳಿಕ ಉಂಟಾದ ರಾಜಕೀಯ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ರಚಿಸಿಕೊಂಡು, ಸಿಎಂ ಆಗಿ ಆಯ್ಕೆಯಾಗಿದ್ದರು. 2019ರ ನವೆಂಬರ್ 28ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಇವರು ವಿಧಾನಪರಿಷತ್ ಅಥವಾ ವಿಧಾನಸಭೆ ಸದಸ್ಯರಾಗಿರಲಿಲ್ಲ. ಆದಕಾರಣ, ಆರು ತಿಂಗಳ ಒಳಗಾಗಿ ಯಾವುದಾದರೂ ಒಂದು ಸದನದ ಸದಸ್ಯತ್ವ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಅವರಿಗೆ ಮೇ 27ರವರೆಗೆ ಸಮಯಾವಕಾಶ ಇತ್ತು.
ಮಹಾರಾಷ್ಟ್ರದಲ್ಲಿ ಕರೊನಾ ಪಿಡುಗು ಜೋರಾಗಿದ್ದು, ಸೋಂಕಿತರ ಸಂಖ್ಯೆ 10 ಸಾವಿರ ದಾಟಿದ್ದು, ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಹೀಗಾಗಿ ವಿಧಾನಸಭೆ ಅಥವಾ ವಿಧಾನಪರಿಷತ್ ಚುನಾವಣೆ ನಡೆಸುವುದು ಅಸಾಧ್ಯವಾಗಿತ್ತು.
ಒಂದು ವೇಳೆ ಮೇ 27ರೊಳಗೆ ವಿಧಾನಪರಿಷತ್ ಚುನಾವಣೆ ನಡೆಸಲು ಅಸಾಧ್ಯವಾಗಿದ್ದರೆ, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತಿತ್ತು. ಕೋವಿಡ್ನಂಥ ಸೂಕ್ಷ್ಮ ಪರಿಸ್ಥಿತಿ ಇರುವಾಗ ಇದು ಸಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಭಗತ್ಸಿಂಗ್ ಕೋಶಯಾರಿ ಅವರನ್ನು ಭೇಟಿಯಾಗಿದ್ದ ಉದ್ಧವ್ ಠಾಕ್ರೆ ವಿಧಾನಪರಿಷತ್ ಚುನಾವಣೆಯನ್ನು ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ರಾಜ್ಯಪಾಲರು ವಿಧಾನಪರಿಷತ್ ಚುನಾವಣೆ ಏರ್ಪಡಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ್ದರು. ಇದನ್ನು ಪರಿಗಣಿಸಿದ ಚುನಾವಣಾ ಆಯೋಗ, ಮೇ 21ರಂದು ವಿಧಾನಪರಿಷತ್ ಚುನಾವಣೆ ನಡೆಸುವ ನಿರ್ಧಾರ ಪ್ರಕಟಿಸಿತು ಎನ್ನಲಾಗಿದೆ. ಇದರಿಂದಾಗಿ ಉದ್ಧವ್ ಠಾಕ್ರೆ ಸಿಎಂ ಸ್ಥಾನ ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ.